ನವದೆಹಲಿ, ಡಿ 4-ಅಡಿಲೇಡ್ ನಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ದಾಖಲೆಯ 335 ರನ್ ಸಿಡಿಸಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಬುಧವಾರ ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರನ್ನು ಭೇಟಿಯಾದರು. ಮತ್ತೊಂದು ಅವಕಾಶ ಸಿಕ್ಕರೆ ಲಾರಾ ದಾಖಲೆ ಮುರಿಯುವುದಾಗಿ ಹೇಳಿದ್ದಾರೆ.
ಲಾರಾ ಅವರೊಂದಿಗೆ ಫೋಟೊವನ್ನು ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಡೇವಿಡ್ ವಾರ್ನರ್, "ಕ್ರಿಕೆಟ್ ದಂತಕತೆ ಭೇಟಿಯಾದ ಕ್ಷಣ ಅದ್ಭುತ. ಮತ್ತೊಂದು ಅವಕಾಶ ಸಿಕ್ಕರೆ ಖಂಡಿತ 400 ರನ್ ಗಳಿಸುತ್ತೇನೆ," ಎಂದು ಶೀರ್ಷಿಕೆ ಬರೆದಿದ್ದಾರೆ.
ವಿಂಡೀಸ್ ದಂತಕೆ ಕಳೆದ ಶನಿವಾರ ವಾಣಜ್ಯ ಕಾರ್ಯಕ್ರಮದ ನಿಮಿತ್ತ ಅಡಿಲೇಡ್ ಗೆ ಆಗಮಿಸಿದ್ದರು. ಅಂದೆ, ಪಾಕಿಸ್ತಾನದ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ಚೊಚ್ಚಲ ತ್ರಿಶತಕ ಸಿಡಿಸಿದ್ದರು , ಅಂತಿಮವಾಗಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನಿಂಗ್ಸ್ ಹಾಗೂ 48 ರನ್ ಗಳಿಂದ ಜಯ ಸಾಧಿಸಿತ್ತು. 335 ರನ್ ಗಳಿಸಿ ಅಜೇಯರಾಗಿದ್ದ ವಾರ್ನರ್ ಲಾರಾ ಅವರ 400 ರನ್ ದಾಖಲೆ ಮುರಿಯುವ ಅವಕಾಶ ಇತ್ತು. ಆದರೆ, ಆಸೀಸ್ ನಾಯಕ ಟಿಮ್ ಪೈನ್ 583/3ಕ್ಕೆ ಡಿಕ್ಲೇರ್ ಮಾಡಿಕೊಂಡಿದ್ದರು.
ಇದಾದ ಬಳಿಕ ಬ್ರಿಯಾನ್ ಲಾರಾ ಅವರು ವಾರ್ನರ್ ನನ್ನ ವೈಯಕ್ತಿಕ ದಾಖಲೆ ಮುರಿಯುವ ಅವಕಾಶವಿತ್ತು. ಆದರೆ, ಟಿಮ್ ಪೈನ್ ಡಿಕ್ಲೇರ್ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 1994ರಲ್ಲಿ ಮೊದಲ ಬಾರಿ ಲಾರಾ 375 ರನ್ ಬಾರಿಸಿದ್ದಾಗ ವಿಂಡೀಸ್ ದಂತಕತೆ ಕ್ಯಾರಿ ಸೋಬರ್ಸ್ ಅವರ ದಾಖಲೆ ಮುರಿದಿದ್ದರು. ಆ ವೇಳೆ ಸೋಬರ್ಸ್ ಬಾರ್ಬಡೋಸ್ ಅಂಗಳಕ್ಕೆ ಆಗಮಿಸಿ ಲಾರಾಗೆ ಅಭಿನಂದಿಸಿದ್ದರು.
ಈ ಬಗ್ಗೆ ಮಾತನಾಡಿದ್ದ ಲಾರಾ, " ಒಂದು ವೇಳೆ ವಾರ್ನರ್ ನನ್ನ ದಾಖಲೆ ಮುರಿದಿದ್ದರೆ, ಸೋಬರ್ಸ್ ರೀತಿ ನಾನೂ ಅಂಗಳಕ್ಕೆ ಹೋಗಿ ವಾರ್ನರ್ ಗೆ ಅಭಿನಂದನೆ ತಿಳಿಸುತ್ತಿದ್ದೆ. ಆದರೆ, ಇದು ಸಾಧ್ಯವಾಗಲಿಲ್ಲ" ಎಂದು ಲಾರಾ ಬೇಸರ ವ್ಯಕ್ತಪಡಿಸಿದ್ದರು.