ನವದೆಹಲಿ, ಜ.27 ಎದುರಾಳಿ ನೀಡಿದ್ದ ಗುರಿಯನ್ನು ಹಿಂಬಾಲಿಸುವಾಗ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರನ್ನು ನೋಡಿ ಕಲಿತಿದ್ದೇನೆ ಎಂದು ಯುವ ಆಟಗಾರ ಶ್ರೇಯಸ್ ಅಯ್ಯರ್ ಹೇಳಿದ್ದಾರೆ. “ಗುರಿಯನ್ನು ಬೆನ್ನಟ್ಟುವುದು ಹೇಗೆ? ವಿರಾಟ್ ಕೊಹ್ಲಿ ಅವರು ಚೇಸ್ ಮಾಡುವಾಗ ಬ್ಯಾಟಿಂಗ್ ಮಾಡುವ ಧಾಟಿಯನ್ನು ಕಂಡಿದ್ದೇನೆ. ನಾನು ಅವರು ಬ್ಯಾಟ್ ಮಾಡುವುದನ್ನು ನೋಡಿ ಕಲಿತಿದ್ದು, ನಿಗದಿತ ಗುರಿ ಮುಟ್ಟಲು ಸಹಾಯವಾಗುತ್ತದೆ” ಎಂದು ಶ್ರೇಯಸ್ ತಿಳಿಸಿದ್ದಾರೆ.
“ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೋಡಿಯೋ ಕಲಿತಿದ್ದೇನೆ. ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅವರಿಂದ ಅರಿತಿದ್ದೇನೆ. ತಂಡದಲ್ಲಿ ಇರುವ ಹಿರಿಯ ಆಟಗಾರರು ಯುವಕರಿಗೆ ಪ್ರೇರಣೆ. ಅನುಭವಿ ಆಟಗಾರರ ಆಟವನ್ನು ನೋಡಿ ಕಲಿತಿದ್ದೇನೆ. ಸ್ಟ್ರೈಕ್ ರೋಟೆಟ್ ಮಾಡುತ್ತಾ ಅವಕಾಶ ಸಿಕ್ಕಾಗ ಸಿಕ್ಸರ್ ಬಾರಿಸುವುದೇ ನಮ್ಮ ಉದ್ದೇಶ” ಎಂದಿದ್ದಾರೆ. “ಕೆಲವು ತಿಂಗಳಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿದ್ದರಿಂದ ಆಡುವುದನ್ನು ಅರಿತಿದ್ದೇನೆ. ಬೌಲರ್ ಗಳ ರಣ ತಂತ್ರವನ್ನು ಅರಿತು ಬ್ಯಾಟ್ ಮಾಡಲು ಸಾಧ್ಯವಾಯಿತು. ಬೌಂಡರಿ ದೂರವನ್ನು ನೋಡಿಕೊಂಡು ಹೊಡೆತಗಳನ್ನು ಪ್ರಯೋಗಿಸುವುದನ್ನು ರೂಡಿಸಿಕೊಳ್ಳುತ್ತಿದ್ದೇನೆ” ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ. ಟೀಮ್ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿ ಆಡಿದ ಎರಡೂ ಟಿ-20 ಪಂದ್ಯಗಳನ್ನು ಗೆದ್ದು ಬೀಗಿದ್ದು, ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಗಳು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ಎರಡನೇ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ವಿರಾಟ್ ಪಡೆ ಗೆಲುವು ದಾಖಲಿಸಿದೆ.