ಕಲಬುರಗಿ, ಫೆ. 7 ,ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯಲ್ಲಿ ತಾರತಮ್ಯ ಮಾಡಿಲ್ಲ. ಸಮ್ಮೇಳನದ ಎಲ್ಲಾ ಅಡೆ ತಡೆಗಳಿಗೆ ನನ್ನನ್ನೇ ಹೊಣೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಸ್ಪಷ್ಟಪಡಿಸಿದ್ದಾರೆ.ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಗೋಷ್ಠಿಯ ನಡುವೆ ಮಾತನಾಡಿದ ಅವರು, ನನ್ನ ಮಾತಿಗೆ ಕಿಂಚಿತ್ತು ಬೆಲೆ ಕೊಡದೆ ಸಮ್ಮೇಳನ ನಡೆಸಲಾಗಿದೆ. ಎಲ್ಲಾ ಅಡೆ ತಡೆಗಳಿಗೆ ನಾನೇ ಕಾರಣ ಎಂದು ಆರೋಪಿಸಿ, ಗುರಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.ಇಲ್ಲಿಯವರೆಗೂ ಲೇಖಕರು, ಹೋರಾಟಗಾರರು ಚಿಕ್ಕಮಗಳೂರಿನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕುರಿತು ನನ್ನ ಪ್ರತಿಕ್ರಿಯೆ ಕೇಳಿಲ್ಲ. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಬದಲಾವಣೆ ಮಾಡಿರುವ ವಿಚಾರ ಅಲ್ಲಿನ ಜಿಲ್ಲಾ ಕಾರ್ಯಕಾರಿ ಸಮಿತಿ ನನ್ನ ಗಮನಕ್ಕೆ ತಂದಿಲ್ಲ. ಸುಳ್ಳು ಆರೋಪಗಳನ್ನು ನನ್ನ ಮೇಲೆ ಹೊರಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲಿನ ಸಮ್ಮೇಳನಕ್ಕೆ ಅನುದಾನ ನೀಡುವ ವಿಚಾರದಲ್ಲಿ ಆರ್ಥಿಕ ವಿಭಾಗಕ್ಕೆ ಸಾರ್ವಭೌಮತ್ವವಿದೆಯೇ ಹೊರೆತು, ನನಗೆ ಯಾವುದೇ ಅಧಿಕಾರವಿಲ್ಲ. ಸರಕಾರ ಅಥವಾ ಸಾರ್ವಜನಿಕರ ಹಣ ಬಿಡುಗಡೆ ಮಾಡುವುದು ನನ್ನ ವ್ಯಾಪ್ತಿಗೆ ಒಳಪಟ್ಟಿಲ್ಲ.
ತನ್ನ ವಿವೇಚನೆಗೆ ಒಳಪಟ್ಟು ಕಾನೂನು ಪ್ರಕಾರ ಖರ್ಚು ಮಾಡುವ ಹಣವನ್ನು ರಾಜ್ಯಪತ್ರ ಇಲಾಖೆ ತಪಾಸಣೆ ಮಾಡುತ್ತದೆ. ಇದಲ್ಲದೆ ಮೂರು ವರ್ಷಗಳಿಗೊಮ್ಮೆ ಆಂತರಿಕ ಹಣಕಾಸು ವಿಭಾಗ ಪರಿಶೀಲನೆ ಮಾಡುತ್ತದೆ. ಕಾರ್ಯಕ್ರಮ ಹಾಕಿಕೊಡುವುದು ನನ್ನ ಕೆಲಸ ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ವಿವಾದಕ್ಕೆ ತಿರುಗಿದಾಗ, ಸಮ್ಮೇಳನವನ್ನು ಎರಡು-ಮೂರು ತಿಂಗಳಿಗೆ ಮುಂದೂಡಲು ಹೇಳಿದ್ದೆ. ಇದನ್ನು ಹೇಳುವ ಅಧಿಕಾರ ನನಗಿಲ್ಲವೇ?. ಇದನ್ನೇ ಅಪಾರ್ಥ ಮಾಡಿಕೊಂಡು ವಿವಾದ ಸೃಷ್ಟಿಸಲಾಗುತ್ತಿದೆ. ಸಮ್ಮೇಳನಕ್ಕೆ ಅನುದಾನ ನೀಡಲು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ನಿರಾಕರಿಸಿದೆ ಎಂಬ ದೂರು ಕೇಳಿ ಬಂದಿದೆ. ಸಮ್ಮೇಳನ ಮುಂದೂಡುವ ವಿಚಾರ ಕುರಿತು ಅಲ್ಲಿನ ಕಾರ್ಯಕಾರಿ ಸಮಿತಿ ತಿರಸ್ಕರಿಸಿದೆ ಎಂದರು. ಸರ್ವಾಧ್ಯಕ್ಷರ ಆಯ್ಕೆಯಲ್ಲಿ ಪರ-ವಿರೋಧ ವ್ಯಕ್ತವಾಗುತ್ತಿದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡುವುದಿಲ್ಲ . ಅಲ್ಲದೇ, ವ್ಯವಸ್ಥೆ ಸರಿಯಾಗುವ ತನಕ ಅನುದಾನ ನೀಡದಿರುವ ಕುರಿತು ತಿಳಿಸಿದ್ದಾರೆ. ಸಮ್ಮೇಳನ ಮಾಡುವ ಅಥವಾ ಬಿಡುವುದು ಅಲ್ಲಿನ ಕಾರ್ಯಕಾರಿ ಸಮಿತಿಗೆ ಬಿಟ್ಟಿದ್ದು. ಸರಕಾರ ಸೂಚಿಸಿದರೆ ಐದು ನಿಮಿಷಗಳಲ್ಲಿ ಹಣ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.