ನವದೆಹಲಿ,ನ 7: ಪಶ್ಚಿಮಕ್ಕೆ ಅಪ್ಪಳಿಸಿರುವ ಮಹಾ ಚಂಡಮಾರುತ ದಿನೆ ದಿನೇ ದುರ್ಬಲಗೊಳ್ಳುತ್ತಿದ್ದರೂ ಪೂರ್ವದಲ್ಲಿನ ಬುಲ್ ಬುಲ್ ಚಂಡಮಾರುತದ ಅರ್ಬಟ ಜೋರಾಗುತ್ತಿರುವುದು ದೇಶದ ಹಲವೆಡೆ ಆತಂಕ, ತಲ್ಲಣ ಮೂಡಿಸಿದ್ದು, ಗುಜರಾತಿನ ಹಲವಡೆ ಮಳೆಯಾಗುತ್ತಿದೆ. ಇದರ ಜೊತೆಗೆ ಇತರೆ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಓಡಿಶಾ, ಪಶ್ಚಿಮಬಂಗಾಳದಲ್ಲಿ ಅಲರ್ಟ್ ಘೋಷಿಸಲಾಗಿದೆ . ದೇಶದ ಪೂರ್ವ ಹಾಗೂ ಪಶ್ಚಿಮ ಕರಾವಳಿ ತೀರಗಳು ಈಗ ಚಂಡಮಾರುತಕ್ಕೆ ಸಿಲುಕಿ ತತ್ತರಿಸುತ್ತಿವೆ.ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಈ ಚಂಡಮಾರುತದಿಂದ ದೇಶದ ಅನೇಕ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು ಮುಂದಿನ 24ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ . ಮುಂಬೈನ ಹಲವು ಕಡೆ ಸಾಧಾರಣ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ. ಬುಲ್ಬುಲ್ ಚಂಡಮಾರುತ ಓಡಿಶಾ ಪ್ರವೇಶಿಸುವ ಸಾಧ್ಯತೆ ಕ್ಷೀಣಿಸಿದ್ದು ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾ ಕರಾವಳಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡೂ ಚಂಡಮಾರುತಗಳ ಹಿನ್ನಲೆಯಲ್ಲಿ ಗುಜರಾತ್, ಮಹಾರಾಷ್ಟ್ರ ಹಾಗೂ ಓಡಿಶಾ, ಪಶ್ಚಿಮಬಂಗಾಳ ರಾಜ್ಯಗಳ ಎಲ್ಲ ಜಿಲ್ಲೆಗಳಲ್ಲೂ ಅಲರ್ಟ್ ಘೋಷಿಸಲಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ತಿಳುವಳಿಕೆ ನೀಡಲಾಗಿದೆ.