ಇದ್ದವರು ಇಲ್ಲದವರಿಗೆ ಸಹಾಯ ನೀಡುವುದೇ ಮಾನವ ಧರ್ಮ: ಗುರುಬಸವ ಶ್ರೀ

ರಾಣೇಬೆನ್ನೂರು: ೧೦: ಸಮಾಜದಲ್ಲಿ ಎಲ್ಲರೂ ಶ್ರೀಮಂತರಿಲ್ಲ. ಬಡವರೇ ಹೆಚ್ಚು ಅಂದು ದುಡಿದು ಅಂದು ತಿನ್ನುವವರೇ, ಹೆಚ್ಚಾಗಿರುವ ಸಮಾಜದಲ್ಲಿ ಇದ್ದವರು ಇಲ್ಲದವರಿಗೆ ಸಹಾಯ ಹಸ್ತದ ಮೂಲಕ ದಾನ-ಧರ್ಮ ಮಾಡುವುದೇ ನಿಜವಾದ ಧರ್ಮವಾಗಿದೆ ಎಂದು ರಾಣೇಬೆನ್ನೂರು ಪುಟ್ಟಯ್ಯನ ವಿರಕ್ತಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ನುಡಿದರು.

ಅವರು ಶನಿವಾರ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಅಲ್ಲಿನ ಕೃಷಿಕ  ಹನುಮಂತಪ್ಪ ದುರಗಪ್ಪ ಕೆರೋಡಿ ಕುಟುಂಬದವರು ಕೊಡಮಾಡಿದ ಜೀವನಾವಶ್ಯಕ ಆಹಾರ ಧಾನ್ಯಗಳ ಕಿಟ್ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತದ ಸಂಸ್ಕೃತಿ ಕೊಡುವುದು ಮತ್ತು ಪಡೆಯುವುದು ಎನ್ನುವ ತತ್ವದ ಅಡಿಯಲ್ಲಿ ವೇದ-ಇತಿಹಾಸ ಕಾಲಗಳಿಂದಲೂ ನಡೆದುಕೊಂಡು ಬಂದಿದೆ.  ನಾಗರೀಕ ಬದುಕು ಇಂದು ಮನುಷ್ಯನನ್ನು ಖಿನ್ನತೆಯತ್ತ ತೆಗೆದುಕೊಂಡು ಹೋಗುತ್ತಲಿದೆ.  ಆದರೆ ಗ್ರಾಮ ಸಂಸ್ಕೃತಿಯ ಬದುಕು ಪರಸ್ಪರ ಪ್ರೀತಿ-ವಿಶ್ವಾಸ ಮತ್ತು ಒಬ್ಬರಿಗೊಬ್ಬರು ಸಹಾಯ ನೀಡುವುದರ ಮೂಲಕ ಸಾಗಿದೆ. 

   ಇದೇ ನಿಜವಾದ ಭಾರತದ ಸಂಸ್ಕೃತಿ ಎನ್ನುವುದಕ್ಕೆ ಇಂದು ಗ್ರಾಮದವರೇ ಆದ ಹನುಮಂತಪ್ಪನವರು ಅಕ್ಕಪಕ್ಕದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ನೀಡಲು ಮುಂದೆ ಬಂದಿರುವುದೇ ಸಾಕ್ಷಿಯಾಗಿದೇ ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಹನುಮಂತಪ್ಪ ಕೆರೋಡಿ ಅವರು ಕರೋನಾ ವೈರಸ್ ದಾಳಿ ಇಟ್ಟಿದ್ದು, ಇದರಿಂದ ಕೇವಲ ನಗರದ ನಾಗರೀಕರು ಅಷ್ಟೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ.  ಪ್ರತಿಯೊಂದು ಹಳ್ಳಿಗಳಲ್ಲಿ ಅನೇಕ ರೀತಿಯಲ್ಲಿ ಆರ್ಥಿಕ  ಸಮಸ್ಯೆಗಳನ್ನು ಎದುರಿಸುವಂತಾಗಿದೆ. 

 ಭಗವಂತ ಕೊಟ್ಟಿದ್ದನ್ನು ಹಂಚಿ ತಿನ್ನುವುದು ಮಾನವ ಧರ್ಮವಾಗಬೇಕು.  ಅಂತಹ ಕಾರ್ಯ ಮಾಡುವ ನಿಟ್ಟಿನಲ್ಲಿ ತಾವು ಮುಂದಾಗಿರುವುದಾಗಿ ಹೇಳಿದ ಅವರು ಗ್ರಾಮಸ್ಥರು ಯಾವುದೇ ಕಾರಣಕ್ಕೂ ಆತ್ಮಸೈರ್ಯ ಕಳೆದುಕೊಳ್ಳದೇ ಸಂಪೂರ್ಣ ಸ್ವಾಭಿಮಾನಿಗಳಾಗದೇ, ಪರಸ್ಪರ ಸಮಸ್ಯೆಗಳನ್ನು ಹಂಚಿಕೊಂಡು ದೈರ್ಯದಿಂದ ಬದುಕನ್ನು ಸಾಗಿಸಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡ ಜಗದೀಶ ಕೆರೋಡಿ, ರಾಜು ಓಲೇಕಾರ, ಮಂಜು ಕೆರೋಡಿ, ರಂಗಣ್ಣ ಬಡಿಗೇರ, ಹನುಮವ್ವ ಸವಣೂರ, ಕವಿತಾ ಕುಂಚೂರ, ಶಿವಕ್ಕ ಕಂಬಳಿ, ಹನುಮವ್ವ ಓಲೇಕಾರ, ನಿಂಬವ್ವ ಗುತ್ತಲ್, ಅಕ್ಕಮ್ಮ ಓಲೇಕಾರ ಸೇರಿದಂತೆ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಮಿತಿಯ ಸದಸ್ಯರು ಮತ್ತು ದುರಗಪ್ಪ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.