ಅಶ್ವಿನ್ ಬದಲಿಗೆ ಜಡೇಜಾಗೆ ಸ್ಥಾನ ನೀಡುವ ಬಗ್ಗೆ ರಹಾನೆ ಅಭಿಪ್ರಾಯವೇನು?

ಕ್ರೈಸ್ಟ್‌ಚರ್ಚ್, ಫೆ 27 :     ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್ ಪಡೆದಿದ್ದ ಸ್ಟಾರ್ ಆಲ್ರೌಂಡರ್ ರವಿ ಚಂದ್ರನ್ ಅಶ್ವಿನ್ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು. ಶನಿವಾರದಿಂದ ಆರಂಭವಾಗುವ ಎರಡನೇ ಪಂದ್ಯಕ್ಕೆ ಅವರ ಬದಲು ರವೀಂದ್ರ ಜಡೇಜಾ ಅವರನ್ನು ಮಣೆಹಾಕಬಹುದು ಎನ್ನಲಾಗುತ್ತಿದೆ. ಈ ಕುರಿತು ಉಪ ನಾಯಕ ಅಜಿಂಕ್ಯಾ ರಹಾನೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಈ ಬಗ್ಗೆ ನಾವು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ವೆಲ್ಲಿಂಗ್ಟನ್ ವಾತಾವರಣದಲ್ಲಿ ಆರ್. ಅಶ್ವಿನ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ರವೀಂದ್ರ ಜಡೇಜಾ ಕೂಡ ಗುಣಮಟ್ಟದ ಸ್ಪಿನ್ನರ್. ಈ ಇಬ್ಬರೂ ಗುಣಮಟ್ಟದ ಬೌಲರ್‌ಗಳು ಅಂಗಳದಲ್ಲಿ ಕಾಣಿಸಿಕೊಂಡರೆ ತಂಡಕ್ಕೆ ಅನುಕೂಲವಾಗಲಿದೆ. ಆದರೆ, ನಾಳೆ ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿರುತ್ತದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ ಏನು ಯೋಚನೆ ಮಾಡಲಿದ್ದಾರೆ ನೋಡಬೇಕು,’’ ಎಂದು ಹೇಳಿದರು.

"ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಿನ್ನೆಲೆಯಲ್ಲಿ ಪ್ರತಿಯೊಂದು ಪಂದ್ಯವೂ ಅತಿ ಮುಖ್ಯ. ಶನಿವಾರದಿಂದ ಆರಂಭವಾಗುವ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿ 60 ಪಾಯಿಂಟ್ ಪಡೆಯುವುದು ನಮ್ಮ ಗುರಿ,’’ ಎಂದು ಹೇಳಿದರು.

"ಪ್ರಸ್ತುತ ಸನ್ನಿವೇಶದಲ್ಲಿ ನಮ್ಮನ್ನು ನಾವು ಉಳಿಸಿಕೊಳ್ಳುವುದು ಸವಾಲಿನ ವಿಚಾರ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಗವಾಗಿ ಎಲ್ಲ ಪಂದ್ಯಗಳು ನಿರ್ಣಾಯಕವಾಗಿರುತ್ತದೆ. ಕನಿಷ್ಠ ಒಂದು ಪಂದ್ಯ ಗೆದ್ದರೆ ನಮ್ಮ ಖಾತೆಗೆ 60 ಅಂಕಗಳು ಸೇರ್ಪಡೆಯಾಗಲಿವೆ. ದೀರ್ಘಾವಧಿಯ ಬಳಿಕ ನಾವು ಇಲ್ಲಿ ಆಡುತ್ತಿದ್ದೇವೆ. ಒಂದು ತಂಡವಾಗಿ ನಾವು ಹೇಗೆ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತೇವೆ ಎಂಬುದು ಇಲ್ಲಿ ಮುಖ್ಯವಾಗಿರುತ್ತದೆ,’’ ಎಂದು ತಿಳಿಸಿದರು.

ಮೊದಲನೇ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಅವರು ತಲಾ ಎರಡು ವಿಕೆಟ್ ಪಡೆದಿದ್ದರು. ನಾವು ಆಡಿರುವುದು ಒಂದೇ ಒಂದು ಪಂದ್ಯ. ಆದರೆ, ಇವರಿಬ್ಬರೂ ಅತ್ಯಂತ ಗುಣಮಟ್ಟದ ವೇಗಿಗಳೆಂದು ಟೀಮ್ ಮ್ಯಾನೇಜ್‌ಮೆಂಟ್‌ಗೆ ಗೊತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಹಾನೆ ಹೇಳಿದ್ದಾರೆ.

“ಇಶಾಂತ್ ಶರ್ಮಾ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಶಮಿ ಹಾಗೂ ಬುಮ್ರಾ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಆಡಿರುವುದು ಒಂದೇ-ಒಂದು ಪಂದ್ಯ ಅಷ್ಟೆ. ಇಲ್ಲಿನ ಪರಿಸ್ಥಿತಿಗಳಿಗೆ ನಾವು ಹೊಂದಿಕೊಳ್ಳುವುದು ಅಗತ್ಯವಿದ್ದು, ಎರಡನೇ ಪಂದ್ಯದಲ್ಲಿ ಹೊಂದಿಕೊಳ್ಳಲಿದ್ದಾರೆಂಬ ನಂಬಿಕೆ ಇದೆ. ಬುಮ್ರಾ ಹಾಗೂ ಶಮಿ ಅವರ ಬಗ್ಗೆ ಯಾವುದೇ ಅನುಮಾನವಿಲ್ಲ. ಒಂದು ವೇಳೆ ನಾವು ಮೊದಲು ಬ್ಯಾಟಿಂಗ್ ಮಾಡಿದ್ದೇ ಆದಲ್ಲಿ ಮೊದಲನೇ ಅವಧಿಯನ್ನು ಅತ್ಯುತ್ತಮವಾಗಿ ಆಡಬೇಕಾಗುತ್ತದೆ,’’ ಎಂದು ಅಜಿಂಕ್ಯಾ ರಹಾನೆ ತಿಳಿಸಿದರು.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಫೆ.29 ರಂದು ನಡೆಯಲಿದೆ. ಈಗಾಗಲೇ ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ಎರಡು ಹಣಾಹಣಿಗಳ ಟೆಸ್ಟ್ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.