ಇಷ್ಟು ಆಕ್ಟೀವ್ ಆಗಿ‌‌ ನಿಮಗೆ ಈಗಲೂ ಹೇಗೆ ಕೆಲಸ‌ ಮಾಡಲು ಸಾಧ್ಯ?: ಮುಖ್ಯಮಂತ್ರಿಗಳನ್ನು ಪ್ರಶ್ನಿಸಿ ಹ್ಯಾಟ್ಸಾಫ್ ಎಂದ ಸುರೇಶ್ ಕುಮಾರ್

ಬೆಂಗಳೂರು, ಮೇ 9,ಕೊರೋನಾ ನಿಯಂತ್ರಣಕ್ಕೆ ಅವರ್ನಿಶಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯವೈಖರಿಗೆ ಸಚಿವ ಸಂಪುಟದ ಸಹೋದ್ಯೋಗಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.ರಾಜ್ಯ ಸರ್ಕಾರವು ಕೋವಿಡ್ ಸವಾಲನ್ನು ಎದುರಿಸುತ್ತಿರುವ ರೀತಿ ಇಡೀ ರಾಷ್ಟ್ರದ ಗಮನ ಸೆಳೆದಿದೆ.  ದೇಶಕ್ಕೆ ಕೊರೋನಾ ಸೋಂಕಿನಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಇಂದು ಹದಿಮೂರನೇ‌  ಸ್ಥಾನಕ್ಕೇರಿದೆ. ಪರಿಹಾರ ಕಾರ್ಯ ಗಳು ರಭಸದಿಂದ‌ ಸಾಗಿವೆ. ಸಮಸ್ಯೆಗಳನ್ನು ಸಮರ್ಥವಾಗಿ  ಎದುರಿಸಲಾಗುತ್ತಿದೆ. ಆಡಳಿತ ಯಂತ್ರ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ.
ಇದಕ್ಕೆ  ಪ್ರೇರಣಾಶಕ್ತಿಯಾಗಿ ರಾಜ್ಯದ ಮುಖ್ಯಮಂತ್ರಿಗಳು ಹಗಲಿರುಳೆನ್ನದೇ ಕೆಲಸ  ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ‌ ಕೃಷ್ಣಾ ಮಹತ್ವದ ಸಭೆಗಳ  ಅಧಿಕೇಂದ್ರವಾಗಿ ಪರಿವರ್ತನೆಯಾಗಿದೆ. ಜನ ಪ್ರತಿನಿಧಿಗಳು ಬಂದು ಸಲಹೆಗಳನ್ನು  ನೀಡುತ್ತಿದ್ದಾರೆ. ಉದ್ಯಮಿಗಳು ಬಂದು ತಮ್ಮ ಯೋಜನೆಗಳನ್ನು ಮಂಡಿಸುತ್ತಿದ್ದಾರೆ.  ಅಧಿಕಾರಿಗಳು ಸಭೆ ನಡೆಸಿ ಯೋಜನೆ ರೂಪಿಸಲು ನಿರ್ದೇಶನ ನಿರೀಕ್ಷಿಸುತ್ತಿದ್ದಾರೆ.
ಇಂತಹ  ಕೇಳರಿಯದ ಸಾಮಾಜಿಕ ಸಂಕಷ್ಟದ ದಿನಗಳಲ್ಲಿ ಸಂಪನ್ಮೂಲಗಳ ಸದ್ಬಳಕೆಗೆ ನಿರ್ದೇಶನ  ನೀಡುತ್ತಾ, ರಾಷ್ಟ್ರಕ್ಕೇ ಮೊದಲಾಗಿ ಎಲ್ಲ ದುರ್ಬಲ‌ ವರ್ಗದವರ ಹಿತ ಕಾಯುವ ಸಾವಿರಾರು  ಕೋಟಿ ರೂಪಾಯಿಗಳ ಯೋಜನೆಗಳಿಗೆ ಚಾಲನೆ ನೀಡುತ್ತಾ, ಬಂದವರೆಲ್ಲರನ್ನೂ ಅಷ್ಟೇ ಸಹನೆಯಿಂದ  ಆಲಿಸುತ್ತಾ ಮುಖ್ಯಮಂತ್ರಿಗಳು ಇಡೀ ಆಡಳಿತ ವ್ಯವಸ್ಥೆಯ ಸ್ಫೂರ್ತಿಸೆಲೆಯಾಗಿದ್ದಾರೆ.  ವಯಸ್ಸನ್ನು ಲೆಕ್ಕಿಸದೇ ರಾಜ್ಯದ ಅಭಿವೃದ್ದಿಗೆ ಹೊಸ ದಿಶೆಯನ್ನು ಕಲ್ಪಿಸಿದ್ದಾರೆ.
ಹಲವಾರು  ಸಭೆಗಳಲ್ಲಿ ಮುಖ್ಯಮಂತ್ರಿಗಳ ಜೊತೆಯಾಗಿರುವ ಅವರ ಸಂಪುಟ ಸಚಿವರಾದ ಸುರೇಶ್‌ಕುಮಾರ್,  ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕುತೂಹಲ ತಾಳದೇ ಪ್ರಶ್ನಿಸಿದ್ದಾರೆ 'ಸಾರ್ ಹೇಗೆ  ಸಾಧ್ಯ ಇದೆಲ್ಲಾ? ಎಂದಿದ್ದಾರೆ' ಮುಖ್ಯಮಂತ್ರಿಗಳು 'ಇಲ್ಲ ಸುರೇಶ್ ಕುಮಾರ್.‌ಇದೊಂದು  (ಕೊರೋನಾ) ಸವಾಲು. ಈ ಸವಾಲನ್ನು ಎದುರಿಸಲೇಬೇಕೆಂಬ ತೀರ್ಮಾನ ಮೊದಲ ದಿನದಿಂದ ನನ್ನದು.‌  ರಾಜ್ಯದ ಜನತೆಯ ಒಟ್ಟು ಹಿತಕ್ಕಾಗಿ ಈ ಎಲ್ಲಾ ಸವಾಲು ಎದುರಿಸಲೇಬೇಕಲ್ಲವೇ?'
ಅವರ  ಕ್ರಿಯಾಶೀಲತೆಗೆ ಬೆರಗಾಗಿರುವ ಸಚಿವ ಸರ್ಕಾರದ ಸದುದ್ದೇಶವನ್ನು ಯಾರೂ ಪ್ರಶ್ನಿಸದ  ರೀತಿಯಲ್ಲಿ‌ ಕೆಲಸ‌ಮಾಡುತ್ತಿರುವ ಮುಖ್ಯಮಂತ್ರಿಗಳಿಗೆ ಹ್ಯಾಟ್ಸಾಫ್ ಎಂದಿದ್ದಾರೆ. ತಮ್ಮ  ಫೇಸ್ ಬುಕ್ ತಾಣದಲ್ಲಿ ನೆನ್ನೆಯ ತಮ್ಮ ಅನುಭವವನ್ನು ದಾಖಲಿಸಿರುವ ಸಚಿವ ಸುರೇಶ್  ಕುಮಾರ್, ಯಡಿಯೂರಪ್ಪನವರ ನೇತೃತ್ವ, Workaholic ಕಾರ್ಯಶೈಲಿ ನಮ್ಮ ರಾಜ್ಯವನ್ನು  ಬಹುತೇಕ ರಾಜ್ಯಗಳಿಗೆ ಹೋಲಿಸಿದರೆ ಸಮಾಧಾನಕರ ಸ್ಥಿತಿಯಲ್ಲಿಡುವಂತೆ ಮಾಡಿದೆ ಎಂದು  ಅಭಿನಂದಿಸಿದ್ದಾರೆ.