ಬೆಂಗಳೂರು, ಫೆ.13,ಬೀದರ್ ಶಾಲೆಯಲ್ಲಿ ಪ್ರದರ್ಶನಗೊಂಡ ನಾಟಕವೊಂದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನೀತಿಗಳನ್ನು ಟೀಕಿಸಲಾಗಿತ್ತು. ಆದರೆ ಇದು ಹೇಗೆ ದೇಶದ್ರೋಹವಾಗುತ್ತದೆ ?. ವಿದ್ಯಾರ್ಥಿನಿಯೊಬ್ಬಳ ತಾಯಿಯನ್ನು ಬಂಧಿಸುವುದು ಅಸಂವಿಧಾನಿಕ ಮತ್ತು ದರ್ಪದ ನಡೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.ತಾಯಿ ಮತ್ತು ಮಗಳನ್ನು ಪ್ರತ್ಯೇಕಿಸಿರುವ ಬಿಜೆಪಿ ಮತ್ತು ಯಡಿಯೂರಪ್ಪ ಅವರನ್ನು ರಾಜ್ಯದ ತಾಯಂದಿರು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ರಾಜ್ಯ ಪೊಲೀಸರು ಬಿಜೆಪಿ ಸರ್ಕಾರದ ಆದೇಶದ ಮೇರೆಗೆ ಕ್ರಮ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಲೆಗೆ ಬಿದ್ದಿದ್ದಾರೆ. ಯಡಿಯೂರಪ್ಪ ತನ್ನ ಸಾಮಾನ್ಯ ಜ್ಞಾನವನ್ನು ಕಳೆದುಕೊಂಡಂತೆ ತೋರುತ್ತದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಪುರಾತನ ಐಪಿಸಿ ಮತ್ತು ಒಂದು ಶತಮಾನದ ಹಿಂದೆ ರೂಪಿಸಲಾದ ಇತರ ಪ್ರಾಚೀನ ಕಾನೂನುಗಳನ್ನು ಸಹ ಪರಿಶೀಲಿಸಬೇಕಾಗಿದೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.