ಮನೆಯಂಗಳದ ಕ್ರಿಕೆಟ್ : ಜಾಗತಿಕ ಗಮನ ಸೆಳೆದ ಗ್ರಾಮೀಣ ಯುವತಿಯ ಕವರ್ ಡ್ರೈವ್ ಶಾಟ್

ಮಂಗಳೂರು, ಜೂ. 13,  ಯುವತಿಯೊಬ್ಬಳು ತನ್ನ ಮನೆಯಂಗಳದಲ್ಲಿ ಕ್ರಿಕೆಟ್ ಆಡುವಾಗ ಮಾಡಿದ್ದ ಕವರ್ ಡ್ರೈವ್ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಯುವತಿಯ ಈ ಕವರ್ ಡ್ರೈವ್ ದೃಶ್ಯವನ್ನು ಅಂತಾರಾಷ್ಟ್ರೀಯ ಮಾಧ್ಯಮ ಕ್ರಿಕ್ ಇನ್ಫೋ ತನ್ನ ಟ್ವಿಟ್ಟರ್ ಪುಟದಲ್ಲಿ ಪ್ರಕಟಿಸಿದೆ. ಯುವತಿಯ ಈ ಶಾಟ್ ಗೆ ಕ್ರಿಕೆಟ್ ಪ್ರೇಮಿಗಳಿಂದ ಅಪಾರ ಮೆಚ್ಚುಗೆ ಬಂದಿದೆ.ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಯುವತಿ ಜ್ಯೋತಿ ಪೂಜಾರಿ,  ಹೀಗೆ ಕವರ್ ಡ್ರೈವ್ ಶಾಟ್ ಮೂಲಕ ಖ್ಯಾತಿ ಗಳಿಸಿದ್ದಾಳೆ.  ಮುಂಬೈ ನಲ್ಲಿ ವಾಸವಿದ್ದ ಜ್ಯೋತಿ ಪ್ರಸ್ತುತ ಕೊರೋನಾವೈರಸ್ ಕಾರಣದ ಲಾಕ್ ಡೌನ್ ಪರಿಣಾಮ ತನ್ನ ಊರಿಗೆ ಬಂದಿದ್ದಳು. ಎರಡು ದಿನಗಳ ಹಿಂದೆ ಆಕೆ ತನ್ನ ಮನೆಯ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದಳು, ಅದನ್ನು ಆಕೆಯ ಬಂಧು  ರಂಜಿತ್ ಪೂಜಾರಿ  ಮೊಬೈಲ್  ರೆಕಾರ್ಡ್ ಮಾಡಿ ತಮ್ಮ ಫೇಸ್ಬುಕ್ ಖಾತೆಗೆ ಅಪ್ಲೋಡ್ ಮಾಡಿದ್ದರು.

ಈ ಕ್ರಿಕೆಟ್ ದೃಶ್ಯವನ್ನು ಗಮನಿಸಿದ್ದ ESPNcricinfo ಈ ಸೊಗಸಾದ ಶಾಟ್ ಅನ್ನು ತನ್ನ ಟ್ವಿಟ್ಟರ್ ಪುಟದಲ್ಲಿ ಪೋಸ್ಟ್ ಮಾಡಿದೆ.’ಲೆಗ್ ಸೈಡ್ ಗೆ ಹೆಜ್ಜೆ ಇಟ್ಟು ಅದನ್ನು ಕವರ್ ಡ್ರೈವ್ ಮೂಲಕ ಹೊಡೆಯುವುದು ಅಪೂರ್ವ’ ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ. ಇದಲ್ಲದೆ ಈ ಹಿಂದೆ ಇಂತಹದ್ದೇನಾದರೂ ನೀವು ಕಂಡಿದ್ದೀರಾ ಎಂದೂ ವೀಕ್ಷಕರನ್ನು ಪ್ರಶ್ನಿಸಿದೆ. ವೀಡಿಯೊದಲ್ಲಿರುವ ಯುವತಿ ವೃತ್ತಿಪರ ಆಟಗಾರರಂತೆ ಕವರ್ ಡ್ರೈವ್ ಮಾಡಿದ್ದು ಶಾಟ್ ಸೊಗಸಾಗಿ ಪೂರ್ಣಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜ್ಯೋತಿ , “ತಾನು ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ ಮತ್ತು ರಂಜಿತ್ ಪೂಜಾರಿ ತನ್ನ ಆಟವನ್ನು ರೆಕಾರ್ಡ್ ಮಾಡಿ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದ” ಎಂದಿದ್ದಾಳೆ. ಆದರೆ ಈ ವಿಡಿಯೋ ಇಷ್ಟು ಪ್ರಸಿದ್ದವಾಗಲಿದೆ ಎಂದು ತಾನು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಆಕೆ ಅಚ್ಚರಿ ವ್ಯಕ್ತಪಡಿಸಿದ್ದಾಳೆ. ಟೈಂ ಆದಾಗಲೆಲ್ಲಾ ನಾನು ಕ್ರಿಕೆಟ್ ಆಡುವೆನು ಎನ್ನುವ ಜ್ಯೋತಿ,  ಎಂ ಎಸ್ ಧೋನಿ ತನ್ನ ನೆಚ್ಚಿನ ಕ್ರಿಕೆಟಿಗ ಎದಿದ್ದಾರೆ.ಹಲವಾರು ಕ್ರಿಕೆಟ್ ಪ್ರೇಮಿಗಳು ಯುವತಿಯ ಆಟದ ಶೈಲಿಯನ್ನು ವಿವಿಧ ಪ್ರಸಿದ್ಧ  ಕ್ರಿಕೆಟಿಗರಿಗೆ ಹೋಲಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ವೀಡಿಯೊವನ್ನು ಇಷ್ಟಪಟ್ಟಿದ್ದು ತಮ್ಮ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ.