ಲೋಕದರ್ಶನ ವರದಿ
ಹಳಿಯಾಳ: ಸ್ವಸಹಾಯ ಸಂಘದ ರೈತ ಸದಸ್ಯರಿಗೆ ಕೈತೋಟ ಮತ್ತು ತಾರಸಿ ತೋಟ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ಮತ್ತು ವಿ.ಆರ್.ಡಿ.ಎಮ್ ಟ್ರಸ್ಟ ಪ್ರಾಯೋಜಿತ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ ಕೆಸರೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಶಾಲೆಯ ಮುಖ್ಯಾಧ್ಯಾಪಕಿ ಪಿ.ಎನ್. ಪಾಟನಕರ ಕಾರ್ಯಕ್ರಮ ಉದ್ಘಾಟಿಸಿ ಮನೆ ಅಂಗಳದಲ್ಲಿ ತರಕಾರಿ, ಹಣ್ಣುಗಳನ್ನು ಬೆಳೆಸುವುದು ಒಂದು ಕಲೆ. ಹೊರಗಿನಿಂದ ಏನನ್ನೂ ಕೊಂಡು ತರದೆ, ಅಡಿಗೆ ಮನೆಯ ತ್ಯಾಜ್ಯ, ಸೆಗಣಿ, ಗಂಜಲು ಇತ್ಯಾದಿಗಳನ್ನು ಉಪಯೋಗಿಸಿ ಅಂದವಾದ ಕೈತೋಟದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಉತ್ಪಾದಿಸುವುದರ ಜೋತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕೆಂದು ಕರೆ ನೀಡಿದರು. ಗ್ರಾಮೀಣ ಪ್ರದೇಶದ ನಾಗರಿಕರಲ್ಲಿ ಸಮತೋಲನ ಆಹಾರ ಒದಗಿಸುವಲ್ಲಿ ಹಣ್ಣು ಮತ್ತು ತರಕಾರಿ ಪಾತ್ರದ ಬಗ್ಗೆ ಅರಿವು ನೀಡಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಸಂಸ್ಥೆಯ ಯೋಜನಾಧಿಕಾರಿ ಸಂತೋಷ ಪರೀಟ ಪ್ರಾಸ್ತಾವಿಕವಾಗಿ ಮಾತನಾಡಿ ನಿರುದ್ಯೋಗ ಯುವಕರಿಗೆ ಉಚಿತವಗಿ ತರಬೇತಿ ಮತ್ತು ಸ್ವ-ಸಹಾಯ ಸಂಘಗಳಿಗೆ ಉತ್ತೇಜನ ನೀಡುವುದರ ಜೊತೆಗೆ, ಗ್ರಾಮೀಣ ಭಾಗದ ರೈತರಿಗೆ ಕೈತೋಟ ಮಾಡಲು ಸ್ಥಳ ಇಲ್ಲದೆ ಇರುವ ಪಕ್ಷದಲ್ಲಿ ಮನೆಯ ತಾರಸಿ ಮೇಲೆ ಕುಂಡಗಳಲ್ಲಿ ಸುಲಭವಾಗಿ ಸಾವಯುವ ಪದ್ಧತಿಯಲ್ಲಿ ತರಕಾರಿ ಬೆಳೆಯಬೇಕೆಂದು ತಿಳಿಸಿದರು.
ಕೆಸರೋಳ್ಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಾಂಧಿ ಯಲ್ಲಪ್ಪಾ ಗೌಡ ಉಪಸ್ಥಿತರಿದ್ದರು. ಸಂಸ್ಥೆಯ ಕ್ಷೇತ್ರಾಧಿಕಾರಿ ಉಳವಯ್ಯಾ ಬೆಂಡಿಗೇರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮಾರು 40 ಕ್ಕೂ ಹೆಚ್ಚು ಸ್ವ-ಸಹಾಯ ಸಂಘದ ರೈತ ಸದಸ್ಯರಿಗೆ ತರಕಾರಿ ಬೀಜ ನೀಡಲಾಯಿತು.