ಆಕ್ಲೆಂಡ್, ಜ 27 ಮೊದಲನೇ ಪಂದ್ಯದ ಭರ್ಜರಿ ಗೆಲುವಿನ ಬಳಿಕ ಕಠಿಣ ಹೋರಾಟದ ನಡುವೆಯೂ ರಾಣಿ ರಾಂಪಾಲ್ ನಾಯಕತ್ವದ ಭಾರತ ಮಹಿಳಾ ಹಾಕಿ ತಂಡ ಎರಡನೇ ಪಂದ್ಯದಲ್ಲಿ 1-2 ಅಂತರದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತು.ಸೋಮವಾರ ನಡೆದ ಪ್ರವಾಸದ ಎರಡನೇ ಪಂದ್ಯದಲ್ಲಿ ಆರಂಭದಲ್ಲೇ ಆತಿಥೇಯರು ಆಕ್ರಮಣಕಾರಿ ಆಟ ಪ್ರದರ್ಶನ ತೋರಿದರು. ಆ ಮೂಲಕ ಮೊದಲ ಕ್ವಾರ್ಟರ್ ನಲ್ಲಿ ಬಹುಬೇಗ ಪೆನಾಲ್ಟಿ ಕಾರ್ನರ್ ಪಡೆದರು. ಪಂದ್ಯದ ಮೂರನೇ ನಿಮಿಷದಲ್ಲಿ ಮೆಗನ್ ಹಲ್ ಪೆನಾಲ್ಟಿ ಕಾರ್ನರ್ ನಲ್ಲಿ ಅತ್ಯದ್ಭುತವಾಗಿ ಗೋಲು ಸಿಡಿಸಿದರು. ನಂತರ, ಸಿಡಿದ ಭಾರತ ವನಿತೆಯರು ಕೂಡ ಪೆನಾಲ್ಟಿ ಕಾರ್ನರ್ ಪಡೆದರು. ಮೊದಲ ಕ್ವಾರ್ಟರ್ ನಲ್ಲಿ ಸಲೀಮಾ ಟೆಟೆ ಅವರು ಗೋಲು ಗಳಿಸಿ 1-1 ಸಮಬಲಕ್ಕೆ ನೆರವಾದರು.
ಮುಂದಿನ ಕ್ವಾರ್ಟರ್ ಗಳಲ್ಲಿ ಭಾರತ ತಂಡ, ಆತಿಥೇಯರಿಗಿಂತ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ರಕ್ಷಣಾ ವಿಭಾಗದಲ್ಲಿ ತಂಡ ಮಾಡಿದ ತಪ್ಪುಗಳು ನ್ಯೂಜಿಲೆಂಡ್ ತಂಡಕ್ಕೆ ವರದಾನವಾಯಿತು. ಆತಿಥೇಯರ ಪರ ತಪ್ಪಿಲ್ಲದೆ ಆಡಿದ ಮೆಗನ್ ಹಲ್ ಮತ್ತೊಂದು ಗೋಲು ಸಿಡಿಸಿ 2-1 ಮುನ್ನಡೆಗೆ ಕಾರಣರಾದರು."ಇಂದು ನಾವು ಗೋಲು ಗಳಿಸಬಹುದಾದ ಅವಕಾಶಗಳು ಕಡಿಮೆಯಾಗಿದ್ದವು. ಆದರೂ ನಾವು ಸಾಕಷ್ಟು ಉತ್ಪಾದಕರಾಗಿರಲಿಲ್ಲ. ಮೊದಲನೇ ಪಂದ್ಯಕ್ಕೆ ಹೊಂದಾಣಿಕೆ ಮಾಡಿದರೆ, ನ್ಯೂಜಿಲೆಂಡ್ ತಂಡ ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತು. ಅವರು ತೋರಿದ ಹೊಂದಾಣಿಕೆ ಹಾಗೂ ಸಂಘಟನೆ ಉತ್ತಮವಾಗಿತ್ತು,'' ಎಂದು ಭಾರತ ತಂಡದ ಕೋಚ್ ಜೋರ್ಡ್ ಮರಿಜ್ನೆ ತಿಳಿಸಿದರು.
"ನೀವು ಎಷ್ಟು ಅವಕಾಶಗಳನ್ನು ರಚಿಸಿದ್ದೀರಿ ಎಂಬದಕ್ಕಿಂತ ಎಷ್ಟು ಪರಿಣಾಮಕಾರಿಯಾಗಿ ಆಡಿದ್ದೀರಿ ಎಂಬುದು ಮುಖ್ಯ. ಮೊದಲನೇ ಪಂದ್ಯಕ್ಕಿಂತ ಎರಡನೇ ಹಣಾಹಣಿಯಲ್ಲಿ ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ತೋರಿದೆ. ನಾವು ಆರಂಭದಲ್ಲಿ ಗಲಿಬಿಲಿಗೊಂಡಿದ್ದೆವು. ಮೊದಲ ಕ್ವಾರ್ಟರ್ ಬಳಿಕ ಸುಧಾರಣೆ ಕಂಡುಕೊಂಡೆವು,'' ಎಂದು ತಿಳಿಸಿದರು."ನಾವು ಇಂದು ಎಂಟು ಹೊಡೆತಗಳನ್ನು ಗೋಲಿನತ್ತ ಹೊಡೆದಿದ್ದೆವು ಹಾಗೂ ನಾಲ್ಕು ಪೆನಾಲ್ಟಿ ಕಾರ್ನರ್ ಪಡೆದೆವು. ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗುತ್ತೇವೆ,'' ಎಂದು ಹೇಳಿದರು.ಮೊದಲನೇ ಪಂದ್ಯದಲ್ಲಿ ಭಾರತ 4-1 ಅಂತರದಲ್ಲಿ ಗೆದ್ದು ನ್ಯೂಜಿಲೆಂಡ್ ಪ್ರವಾಸವನ್ನು ಶುಭಾರಂಭ ಮಾಡಿತ್ತು. ಬುಧವಾರ ರಾಣಿ ರಾಂಪಾಲ್ ಪಡೆದ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.