ಆಕ್ಲೆೆಂಡ್, ಫೆ 5 : ಸ್ಟ್ರೈಕರ್ ನವನೀತ್ ಕೌರ್ ಅವರ ಎರಡು ಗೋಲುಗಳ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ ಐದು ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತು.
ನವನೀತ್ ಕೌರ್ ಅವರು 45ನೇ ಮತ್ತು 58ನೇ ನಿಮಿಷಗಳಲ್ಲಿ ಎರಡು ಗೋಲು ಗಳಿಸಿದರೆ, ಶರ್ಮಿಳಾ 54ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದ್ದರು. ಈ ಮೂರು ಗೋಲುಗಳ ಸಹಾಯದಿಂದ ಭಾರತ ಗೆದ್ದು ನ್ಯೂಜಿಲೆಂಡ್ ಪ್ರವಾಸವನ್ನು ಅಂತ್ಯಗೊಳಿಸಿತು.
ಗೋಲು ರಹಿತ ಎರಡು ಕ್ವಾರ್ಟರ್‌ಗಳ ಬಳಿಕ ಭಾರತಕ್ಕೆೆ ನವನೀತ್ ಕೌರ್ 45ನೇ ನಿಮಿಷದಲ್ಲಿ ಮೊದಲನೇ ಗೋಲು ತಂದುಕೊಟ್ಟರು.
ನಂತರ ಸಿಡಿದೆದ್ದ ಶರ್ಮಿಳಾ 54ನೇ ನಿಮಿಷದಲ್ಲಿ ನ್ಯೂಜಿಲೆಂಡ್ ಗೋಲ್ ಕೀಪರ್ ಅನ್ನು ವಂಚಿಸಿ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಇದಾದ ಕೇವಲ ಎರಡು ನಿಮಿಷಗಳ ಅಂತರದಲ್ಲಿ ನವನೀತ್ ಕೌರ್ ತಮ್ಮ ಎರಡನೇ ಗೋಲು ಗಳಿಸಿದರು. ಆ ಮೂಲಕ ಭಾರತಕ್ಕೆೆ 3-0 ಮುನ್ನಡೆ ತಂದುಕೊಟ್ಟರು.
ಪ್ರವಾಸದ ಮೊದಲನೇ ಪಂದ್ಯದಲ್ಲಿ ಭಾರತ 4-0 ಅಂತರದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿತ್ತು. ನಂತರ ಎರಡು ಪಂದ್ಯಗಳಲ್ಲಿ ಕ್ರಮವಾಗಿ 1-2 ಹಾಗೂ 0-1 ಅಂತರದಲ್ಲಿ ಸೋಲು ಅನುಭವಿಸಿತ್ತು. ಫೆಬ್ರುವರಿ 7 ರಂದು ಭಾರತ ವನಿತೆಯರು ತವರಿಗೆ ಮರಳಲಿದ್ದಾರೆ.