ನವದೆಹಲಿ, ಆಗಸ್ಟ್ 27 ಜಮ್ಮು ಕಾಶ್ಮೀರ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಲಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರ ಅಧ್ಯಕ್ಷತೆಯಲ್ಲಿ ಕಾಶ್ಮೀರ ಕುರಿತು ನಡೆಯಲಿರುವ ಮೊದಲ ಸಭೆ ಇದಾಗಲಿದೆ. ಇದೊಂದು ಅಂತರ ಸಚಿವಾಲಯಗಳ ಸಭೆಯಾಗಿದ್ದು, ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ರದ್ದುಪಡಿಸಿ, ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ಭದ್ರತೆ ಹಾಗೂ ಇತರ ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ಪರಾಮರ್ಶಿ ನಡೆಸಲಿರುವ ಮೊದಲ ಉನ್ನತಮಟ್ಟದ ಸಭೆ ಇದಾಗಲಿದೆ. ರಾಜ್ಯದಲ್ಲಿ ಮೊಬೈಲ್ ನೆಟ್ ವರ್ಕ್ ಪುನರಾಂಭಗೊಳಿಸುವುದು ಪ್ರಮುಖ ವಿಷಯವಾಗಿದ್ದು, ಸಭೆಯಲ್ಲಿ ಈ ಅಂಶವೂ ಚರ್ಚೆಗೆ ಬರುವ ನಿರೀಕ್ಷೆಯಿದೆ ಅಧಿಕಾರಿ ಮೂಲಗಳು ಹೇಳಿವೆ 370 ವಿಧಿ ರದ್ದುಪಡಿಸಿದ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತ, ರಾಜ್ಯದಲ್ಲಿ ಹಂತ ಹಂತವಾಗಿ ನಿರ್ಬಂಧಗಳನ್ನು ಹಿಂಪಡೆಯುವ ಮೂಲಕ ಸಹಜ ಪರಿಸ್ಥಿತಿ ಮೂಡಿಸಲು ಕ್ರಮ ಕೈಗೊಳ್ಳುತ್ತಿವೆ. ಕಣಿವೆ ರಾಜ್ಯದಲ್ಲಿ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳು ಈಗಾಗಲೇ ಪುನರಾಂಭಗೊಂಡಿದ್ದು, ಶಾಲೆಗಳಲ್ಲಿ ಮಕ್ಕಳ ಹಾಗೂ ಕಚೇರಿಗಳ ಸಿಬ್ಬಂದಿಯ ಹಾಜರಾತಿ ಉತ್ಸಾಹದಾಯಕವಾಗಿದೆ.