ಡ್ರಗ್ಸ್ ಮಾರಾಟ ದಂಧೆ: ನೈಜೀರಿಯಾ ಪ್ರಜೆಯ ಬಂಧನವನ್ನು ಎತ್ತಿಹಿಡಿದ ಹೈಕೋರ್ಟ್‌

ಬೆಂಗಳೂರು, ಮೇ 29,ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ನೈಜೀರಿಯಾ ದೇಶದ ಪ್ರಜೆಯ ಮೇಲೆ ಕರ್ನಾಟಕ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಬಂಧನದ ಆಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಸಲಹಾ ಮಂಡಳಿ ಎತ್ತಿ ಹಿಡಿದಿದೆ.ಈ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಾ ರಾಜ್ಯ ಪೊಲೀಸರಿಗೆ ತಲೆನೋವಾಗಿದ್ದ ನೈಜರೀಯಾ ಪ್ರಜೆಯನ್ನು ಜೈಲಿಗಟ್ಟಿದ್ದಾರೆ.
ನೈಜೀರಿಯಾ ದೇಶದ ಪ್ರಜೆ ಮಕುಕೊ ಚುಕುಕಾ ಮುಲೊಕ್ವು ಅಲಿಯಾಸ್‌ ಹೆನ್ರಿ ಅಲಿಯಾಸ್ ಮಿರಾಕಲ್ ಚುಕುಕೊ 2012ರಲ್ಲಿ ಭಾರತಕ್ಕೆ ಬಂದಿದ್ದ. ಅಲ್ಲಿಂದ ಆತ ನೇರವಾಗಿ ಬೆಂಗಳೂರಿಗೆ ಬಂದು ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಆತ ನಿರಂತರವಾಗಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದು, ಕೊಕೇನ್ ಹಾಗೂ ಇತರ ಮಾದಕ ದ್ರವ್ಯಗಳ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಈ ಹಿಂದೆ ಆತನ ಮೇಲೆ ಬೆಂಗಳೂರು ನಗರದ ಕೊತ್ತನೂರು, ಕೋಣನಕುಂಟೆ ಮತ್ತು ಬಾಣಸವಾಡಿ ಪೊಲಿಸ್ ಠಾಣೆಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿ ಪೊಲೀಸ್ ಠಾಣೆ ಹಾಗೂ ಬೆಂಗಳೂರಿನ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋಗಳಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿವೆ.
 ಮಕುಕೊ ಚುಕುಕಾ, ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಮನೆಯಲ್ಲಿ ಪದೇ ಪದೇ ಬದಲಾಯಿಸಿ ಡ್ರಗ್ಸ್ ಮಾರಾಟ ದಂಧೆಯನ್ನು ಮುಂದುವರಿಸುತ್ತಿದ್ದ. ಈತನ ಪತ್ನಿ ಗಿಫ್ಟ್‌ ಚಿನೆನ್ಯಾ ಬೆನೆಡಿಕ್ಟ್‌ ಸಹ ಈತನ ಡ್ರಗ್ಸ್‌ ದಂಧೆಗೆ ಸಹಕರಿಸುತ್ತಿದ್ದು, ಎರಡು ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದಳು. ಈತ ಮನೆಯನ್ನು ಬಾಡಿಗೆಗೆ ಪಡೆದುಕೊಳ್ಳುವಾಗ ಮನೆಯ ಮಾಲೀಕರಿಗೆ ನಕಲಿ ಪಾಸ್‌ಪೋರ್ಟ್‌ ನೀಡಿ ಬಟ್ಟೆ ವ್ಯಾಪಾರ ಮಾಡುತ್ತಿರುವುದಾಗಿ ಸುಳ್ಳು ಹೇಳಿ ಮನೆಯನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿದ್ದ.
ಆತ ಇದೇ ರೀತಿ ತನ್ನ ಕೃತ್ಯವನ್ನು ಮುಂದುವರಿಸಿದ್ದರಿಂದ ಅಂತಿಮವಾಗಿ ಡ್ರಗ್ಸ್ ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ 1988ರಲ್ಲಿ ಜಾರಿಗೆ ತಂದಿದ್ದ ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಈತನ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಈ ಕಾಯ್ದೆಯಡಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಅಪರಾಧ ವಿಭಾಗದ ಡಿಸಿಪಿ ಕುಲ್‌ದೀಪ್ ಕುಮಾರ್ ಜೈನ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಅವರ ಶಿಫಾರಸ್ಸು ಮೇರೆಗೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇದೇ ವರ್ಷದ ಮಾರ್ಚ್ 16ರಂದು ಈತನ ಬಂಧನಕ್ಕೆ ಆಜ್ಞೆ ಹೊರಡಿಸಿದ್ದರು. ಮಾರ್ಚ್ 17ರಂದು ವಿದ್ಯಾರಣ್ಯಪುರದ ವಡೇರಹಳ್ಳಿಯ ತನ್ನ ವಾಸದ ಬಾಡಿಗೆ ಮನೆಯಲ್ಲಿ ಇದ್ದಾಗ ಆತನನ್ನು ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ತಳ್ಳಲಾಗಿತ್ತು.
 ಮಕುಕೊ ಚುಕುಕಾ ಬಂಧನದ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ರಾಜ್ಯ ಹೈಕೋರ್ಟ್‌ನ ಮೂವರು ನ್ಯಾಯಾಧೀಶರನ್ನು ಒಳಗೊಂಡ ಸಲಹಾ ಮಂಡಳಿಯು ಪೊಲೀಸ್ ಆಯುಕ್ತರು ಹೊರಡಿಸಿದ್ದ ಬಂಧನದ  ಕ್ರಮವನ್ನು ಎತ್ತಿಹಿಡಿದಿದೆ. ರಾಜ್ಯ ಗೃಹ ಇಲಾಖೆಯು ಈ ವ್ಯಕ್ತಿಯ ಬಂಧನದ ಆದೇಶವನ್ನು ಸ್ಥಿರೀಕರಿಸಿ ಒಂದು ವರ್ಷ ಕಾರಾಗೃಹ ವಾಸವನ್ನು ಖಾಯಂಗೊಳಿಸಿ ಆದೇಶಿಸಿದೆ.
ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಪೊಲೀಸ್ ಇನ್ಸ್‌ ಪೆಕ್ಟರ್ ಶ್ರೀಧರ ಪೂಜಾರ ಅವರು ಈ ಕಾಯ್ದೆಯಡಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಈ ತನ ವಿರುದ್ಧ ಕ್ರಮಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿದ್ದರು.ಡ್ರಗ್ಸ್ ಮಾರಾಟ ಜಾಲವನ್ನು ನಿಯಂತ್ರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಸಲುವಾಗಿ ಇದು ಕರ್ನಾಟಕ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಿಸಿಬಿ ಪೊಲೀಸರಿಂದ ಅನುಷ್ಠಾನಗೊಂಡ ಕಾಯ್ದೆಯಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.