ಮಹಾರಾಷ್ಟ್ರ ಗಡಿಭಾಗ ನಿಪ್ಪಾಣಿಯಲ್ಲಿ ಹೈ ಅಲರ್ಟ್

ನಿಪ್ಪಾಣಿ, ಮಾ 31,  ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗಡಿ ನಗರ ನಿಪ್ಪಾಣಿಯಲ್ಲಿ ಸೂಕ್ತ ಬಂದೊಬಸ್ತ್ ಕೈಗೊಳ್ಳಲಾಗಿದೆ ಎಂದು ಸಿ.ಪಿ.ಐ ಸಂತೋಷ ಸತ್ಯನಾಯಿಕ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರಾಜ್ಯದಲ್ಲಿ ಈಗಾಗಲೇ ೧೪೪ ಕಲಂ ಜಾರಿಯಲ್ಲಿದ್ದು  ನಗರದಲ್ಲಿ ಅನಗತ್ಯವಾಗಿ ಒಡಾಡುವ ಜನರ ಮೇಲೆ  ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು, ಸರಕಾರದ ಆದೇಶವನ್ನು  ಪ್ರತಿಯೊಬ್ಬರೂ  ಪಾಲನೆ ಮಾಡಬೇಕು. ಸಾರ್ವಜನಿಕರು  ಇದಕ್ಕೆ ಸ್ಪಂದಿಸಿದರೆ ಮಾತ್ರ ಸೋಂಕು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯಕ್ಕೆ ಹಾಗೂ ಕರ್ನಾಟಕ ರಾಜ್ಯದಿಂದ ಮಹಾರಾಷ್ಟ್ರ ರಾಜ್ಯಕ್ಕೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು ಅತೀ ಅವಶ್ಯಕತೆ ಇರುವಂತಹ ಸೇವೆಗಳಾದ ಅಂಬ್ಯುಲೆನ್ಸ್, ಸಾರ್ವಜನಿಕರಿಗೆ ಅವಶ್ಯಕವಿರುವ ಸರಕುಗಳು ಹಾಗೂ ಹಾಲಿನ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕರು ಸೂಕ್ತ ಆಸ್ಪತ್ರೆಯ ದಾಖಲೆಗಳನ್ನು ತೊರಿಸಿದ್ದಲ್ಲಿ ಸಂಚಾರಕ್ಕೆ ಅನೂಮತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ನಗರದಲ್ಲಿ ಇದುವರೆಗೆ ೧೮ ಜನರು ಹೋಂಮ್ ಕ್ವಾರಂಟೈನ್ ನಲ್ಲಿದ್ದು, ಅವರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದೆ. ಮನೆಯಿಂದ ಹೊರಬರದಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.ಜನಜಾಗೃತಿಗಾಗಿ ಆಟೋ ರಿಕ್ಷಾ ಮೂಲಕ  ಧ್ವನಿವರ್ಧಕ ಮತ್ತಿತರ ಪರಿಕರಗಳನ್ನು ಬಳಸಿ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ  ಸೋಂಕಿನ ಕುರಿತು ಮುಂಜಾಗ್ರತಾ ಕ್ರಮಗಳು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಮಾಹಿತಿ ನಿಡಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಹೆಚ್ಚಿನ ಹೈ ಅಲರ್ಟ್ ಘೋಷಿಸಿದ್ದು ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿಯೇ ಇರುವಂತೆ ಸೂಚನೆ ನೀಡುತ್ತಿದ್ದೇವೆ. ವಾಯು ವಿಹಾರಕ್ಕಾಗಿ ಹೊರ ಬರುವವರ ವಿರುದ್ದವೂ ಕಠಿಣ  ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಹಣ್ಣು ಹಾಗೂ  ತರಕಾರಿ ಮತ್ತಿತ್ತರ ವಸ್ತುಗಳನ್ನು ಮಾರಾಟ ಮಾಡಲು ನಗರದಲ್ಲಿ ಈಗಾಗಲೇ ಕೆಲವು ವ್ಯಕ್ತಿಗಳನ್ನು ಗುರುತಿಸಿದ್ದು ಅವರಿಗೆ ಬೆಳಿಗ್ಗೆ ೬ ರಿಂದ ೮ ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿಪ್ಪಾಣಿ ನಗರದ ಹೊರವಲಯದಲ್ಲಿ ೨ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ  ನಿಗಾ ವಹಿಸಲಾಗಿದೆ ಎಂದರು.