ಹಾಸನ, ಆ 11 ಜಿಲ್ಲೆಯ ಹೇಮಾವತಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಎಚ್.ಕೆ. ಕುಮಾರಸ್ವಾಮಿ ಇಂದು ಜಲಾಶಯಕ್ಕೆ ಬಾಗಿನ ಸಮರ್ಪಿಸಿದರು.
ಸುದ್ದಿಗಾರರೂದಿಂಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ನಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಮಳೆಯಾಗಿದ್ದು, 1,01,967 ಕ್ಯೂಸೆಕ್ ನೀರಿನ ಒಳಹರಿವು ಇದೆ. ಈ ಕಾರಣದಿಂದ ಜಲಾಶಯಕ್ಕೆ ಮತ್ತು ಜನರಿಗೆ ತೊಂದರೆಯಾಗದಂತೆ ಹೆಚ್ಚುವರಿ ನೀರನ್ನು ಹರಿಸಲು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ತಿರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಈಗಾಗಲೇ ಪ್ರವಾಹದಿಂದ ಹೊಳೆನರಸಿಪುರ ತಾಲ್ಲೂಕಿನಲ್ಲಿ 25 ಸಾವಿರ ಎಕರೆ, ಬೇಲೂರು ತಾಲೂಕಿನಲ್ಲಿ 50 ಸಾವಿರ ಎಕರೆ ಭೂಮಿ ಹಾಳಾಗಿದೆ. ಜಿಲ್ಲೆಯಲ್ಲಿ 18 ಕಾಲುವೆಗಳು ಒಡೆದಿವೆ. ಹಳೆಕೋಟೆ ಹೋಬಳಿಯಲ್ಲಿ 98 ಮನೆಗಳು, ಚನ್ನರಾಯಪಟ್ಟಣದಲ್ಲಿ 28 ಮನೆಗಳು, ಹೊಳೆನರಸಿಪುರದಲ್ಲಿ 5 ಮತ್ತು ಗನ್ನಿಕಡದಲ್ಲಿ ಹಲವು ಮನೆಗಳು ಕುಸಿದಿವೆ. ಚನ್ನರಾಯಪಟ್ಟನದ 78 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದರು.
ಪ್ರತಿ ದಿನವು ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಿದ್ದು ಅದಕ್ಕೆ ಅನುಗುಣವಾಗಿ ಗಂಜಿಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಹೊಳೆನರಸಿಪುರದಲ್ಲಿ 1, ಸಕಲೇಶಪುರದಲ್ಲಿ 6, ಬೇಲೂರಿನಲ್ಲಿ 4 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಜಾನುವಾರುಗಳಿಗಾಗಿ ಗೋಶಾಲೆಗಳನ್ನು ಆರಂಭಿಸಲಾಗಿದೆ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದರು.
ಚೆಸ್ಕಾಂ ಅಧಿಕಾರಿಗಳಿಗೆ ಜಲಾವೃತ ಸ್ಥಳಗಳಲ್ಲಿ ವಿದ್ಯುತ್ ಕಡಿತ ಮಾಡಲು ಹೇಳಲಾಗಿದೆ. ಚನ್ನರಾಯಪಟ್ಟಣದಲ್ಲಿ ವಿದ್ಯುತ್ ಸ್ಪರ್ಶಿಸಿ ಓರ್ವ ವ್ಯಕ್ತಿ ಸತ್ತಿದ್ದಾರೆ. ಹಾಗಾಗಿ ಜನರಿಗೆ ವಿದ್ಯುತ್ ಅಪಾಯದ ಬಗ್ಗೆ ಜಾಗೃತರಾಗಿರಿ ಎಂದು ತಿಳಿಸಲಾಗಿದೆ ಎಂದರು.
ಜಿಲ್ಲೆಯ ಸಂತ್ರಸ್ತರ ತಾತ್ಕಾಲಿಕ ಪರಿಹಾರಕ್ಕಾಗಿ 5 ಕೋಟಿ ಅನುದಾನ ಬಂದಿದ್ದು ಅದು ಸಾಕಾಗುವುದಿಲ್ಲ ಹಾಗಾಗಿ ಇನ್ನೂ 10 ಕೋಟಿ ಹಣದ ಅಗತ್ಯವಿದೆ ಅದನ್ನು ಸರ್ಕಾರ ಕೂಡಲೇ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲೆಯ ದಂಡಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಬಹಳ ಮುತುವರ್ಜೆಯಿಂದ ಕೆಲಸ ಮಾಡುತ್ತಿದ್ದಾರೆ, ಅವರೆಲ್ಲರಿಗೂ ಧನ್ಯವಾದ ಸಲ್ಲಿಸುವೆ ಎಂದರು.
ಈ ಸಮಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಎ.ಎಸ್.ಪ್ರಕಾಶ್ ಗೌಡ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ಹೂಡಾ ಅಧ್ಯಕ್ಷ ರಾಜೇಗೌಡ, ಜಿಲ್ಲಾ ಪಂಚಾಯತ್ ಸದಸ್ಯೆ ಜಯಮ್ಮ ಇತರರು ಹಾಜರಿದ್ದರು.