ಚಿಕ್ಕಮಗಳೂರು, ಮೇ 10,ನಿಸ್ವಾರ್ಥ ಸೇವೆ, ತ್ಯಾಗ, ದಾಸೋಹ ಗುಣ ಆಧ್ಯಾತ್ಮಿಕ ಭಕ್ತಿಯಿಂದಾಗಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ 500 ವರ್ಷ ಕಳೆದರೂ ಜನಸಾಮಾನ್ಯರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಸಾಮಾನ್ಯ ವರ್ಗದ ಕುಟುಂಬದಲ್ಲಿ ಹುಟ್ಟಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉನ್ನತಿ ಸಾಧಿಸಿದ ಹೇಮೆರೆಡ್ಡಿ ಮಲ್ಲಮ್ಮ ತನ್ನ ನಿಸ್ವಾರ್ಥ ಸೇವೆ, ತ್ಯಾಗ, ದಾಸೋಹಗುಣದಿಂದಾಗಿ ಜನಮೆಚ್ಚುಗೆ ಪಡೆದವಳು ಶೈಲ ಮಲ್ಲಿಕಾರ್ಜುನನ್ನು ತನ್ನ ಆರಾಧ್ಯ ದೈವವನ್ನಾಗಿಸಿಕೊಂಡು ಉತ್ತುಂಗ ಸ್ಥಿತಿಗೆ ತಲುಪಿದ ಆಧ್ಯಾತ್ಮಿಕ ಕ್ಷೇತ್ರದ ಧೃವತಾರೆ ಎಂದರು.
ಯಾವುದೇ ವ್ಯಕ್ತಿಗತ ಸುಖವನ್ನು ಬಯಸದೇ ಎಲ್ಲವನ್ನು ತ್ಯಾಗ ಮಾಡಿ ಸಮುದಾಯ, ಸಮಾಜಕ್ಕಾಗಿ ಜೀವಿಸಿದವಳು ಮಲ್ಲಮ್ಮ, ರೆಡ್ಡಿ ಕುಲದ ಏಳಿಗೆಯನ್ನು ಬಯಸಿದ ಅವಳನ್ನು ಆ ಸಮುದಾಯ ಇಂದಿಗೂ ಮಹಾತಾಯಿಯಂತೆ ಪೂಜಿಸಲಾಗುತ್ತದೆ ತನ್ನ ಮೈದುನನಾದ ವೇಮನ ದುಶ್ಚಟಗಳಲ್ಲಿ ತೊಡಗಿದ್ದಾಗ ಅವನಿಗೆ ಬುದ್ದಿವಾದ ಹೇಳಿ ಅವನನ್ನು ಆಧ್ಯಾತ್ಮಿಕ ಸಾಧನೆಯ ಹರಿಕಾರನನ್ನಾಗಿ ರೂಪಿಸಿದ ಶರಣೆ ಎಂದರು.
ಮಲ್ಲಿಕಾರ್ಜುನನ ಅನುಗ್ರಹದಿಂದಾಗಿ ಎಲ್ಲ ಕಷ್ಟಗಳಿಂದ ಬಿಡುಗಡೆ ಹೊಂದಿ ಆದರ್ಶ ಶರಣೆಯಾಗಿ ರೂಪುಗೊಂಡವಳು ಪರಸ್ಪರ ನಂಬಿಕೆ, ವಿಶ್ವಾಸ, ಕ್ಷಮಿಸುವ ಗುಣ ಸಕಲ ಜೀವರಾಶಿಗಳಲ್ಲೂ ಒಳಿತನ್ನು ಬಯಸಬೇಕೆನ್ನುವ ಮನೋಭಾವನೆಯಿಂದ ಬದುಕಿದವಳು ಎಂದ ಅವರು ಆಂದ್ರದಲ್ಲಿ ತೆಲುಗು ಸಮುದಾಯವು ಕವಿ ವೇಮನನ್ನು ಇಂದಿಗೂ ಗೌರವ ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ ಸಂತ ಶಿಶುನಾಳ ಷರೀಪರು ಹೇಮರೆಡ್ಡಿ ಮಲ್ಲಮ್ಮನ ಕುರಿತು ಅನೇಕ ಗೀತೆಗಳನ್ನು ರಚಿಸಿದ್ದಾರೆ ಅವಳ ಆದರ್ಶ, ತತ್ವ, ಆಧ್ಯಾತ್ಮಿಕ ಚಿಂತನೆಗಳು ಇಂದಿಗೂ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿವೆ ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶುಭ ಸತ್ಯಮೂರ್ತಿ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಉಪವಿಭಾಗಾಧಿಕಾರಿ ಡಾ. ಹೆಚ್.ಎಲ್ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್, ಹೆಚ್.ಡಿ. ತಮ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.