ಲೋಕದರ್ಶನ ವರದಿ
ಬೈಲಹೊಂಗಲ: ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 168 ಕ್ಕೂ ಹೆಚ್ಚು ಮನೆಗಳ ಗೋಡೆಗಳು ಅಲ್ಪ-ಸ್ವಲ್ಪ ಬಿದ್ದ ವರದಿಯಾಗಿದೆ.
ಪಟ್ಟಣದ ಗೋಕಾವಿ ಗಲ್ಲಿಯಲ್ಲಿರುವ ಕೈರುನ್ನಿಸಾ ಫಕ್ರುಸಾಬ ಅತ್ತಾರ(70), ರಫೀಕ ಫಕ್ರುಸಾಬ ಅತ್ತಾರ(42), ಶಫೀಹ್ಮದ ಫಕ್ರುಸಾಬ ಅತ್ತಾರ(37) ಮನೆ ಛಾವಣಿ ಕುಸಿದು ನೆಲಕ್ಕುರುಳಿದೆ. ಮನೆ ಗೊಡೆ ಬಿರುಕು ಬಿಟ್ಟಿದ್ದನ್ನು ಅರಿತು ಕಳೆದ 4 ದಿನಗಳ ಹಿಂದೆ ಸಂಭಂದಿಕರ ಮನೆಯಲ್ಲಿ ವಾಸವಾಗಿದ್ದಾಗ ಈ ಘಟನೆ ಸಂಭವಿಸಿದೆ. ಒಂದು ವೇಳೆ ಮನೆಯಲ್ಲಿ ಆ ಕುಟುಂಬ ವಾಸವಾಗಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.
ದೇವಲಾಪುರ ರಸ್ತೆಯ ಬಸವೇಶ್ವರ ಆಶ್ರಯ ಕಾಲೋನಿಯಲ್ಲಿ 3, ಬೇವಿನಕೊಪ್ಪ 6, ಅಮಟೂರ 8, ನಯಾನಗರ 3, ಆನಿಗೋಳ, ವಕ್ಕುಂದ, ಕೊರವಿನಕೊಪ್ಪ ಗ್ರಾಮಗಳಲ್ಲಿ ತಲಾ 9 ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಗೆ ಗೋಡೆಗಳು ಕುಸಿದು ಬಿದ್ದಿವೆ. ಅಲ್ಲಲ್ಲಿ ಮನೆಗಳು ಸಂಪೂರ್ಣ ನೆಲಕಚ್ಚಿವೆ. ಹಾನಿಯಾದ ಸ್ಥಳಗಳಿಗೆ ತಹಸೀಲ್ದಾರ ಡಾ.ಡಿ.ಎಚ್.ಹೂಗಾರ, ಕಂದಾಯ ನೀರಿಕ್ಷಕ ಎಂ.ಬಿ.ಹಿರೇಮಠ, ಗ್ರಾಮಲೆಕ್ಕಾಧಿಕಾರಿ ಎಸ್.ಬಿ.ಮಠದ ಭೇಟಿ ನೀಡಿ ಪರಿಶೀಲಿಸಿದರು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣದಿಂದ ವ್ಯಾಪಾರಸ್ಥರು ವ್ಯಾಪಾರಿಲ್ಲದೇ ಗ್ರಾಹಕರ ಬರುವಿಗಾಗಿ ದಾರಿ ನೋಡುವಂತಾಗಿತ್ತು. ಮದ್ಯಾಹ್ನ ಹೊತ್ತಿಗೆ ಬಿಸಿಲಿ ಬಿದ್ದಿದ್ದರಿಂದ ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟು ದೀಪಾವಳಿ ಹಬ್ಬದ ಭರ್ಜರಿ ವ್ಯಾಪಾರ ವಹಿವಾಟು ನಡೆಸಿದರು.