ಪಾದರಾಯನಪುರನಲ್ಲಿ ಇಂದಿನಿಂದ ಎಲ್ಲರ ಆರೋಗ್ಯ ತಪಾಸಣೆ; ಬಿಬಿಎಂಪಿ

ಬೆಂಗಳೂರು, ಮೇ 13,ಬೆಂಗಳೂರು ನಗರದಲ್ಲಿ ಕಂಟೈನ್‌ಮೆಂಟ್‌ ವಲಯದಲ್ಲಿರುವ ಪಾದರಾಯನಪುರ ವಾರ್ಡ್‌ನಲ್ಲಿ 49 ಕೋವಿಡ್‌ 19  ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ವಾರ್ಡ್‌ನಲ್ಲಿ ಬುಧವಾರದಿಂದ ವ್ಯಾಪಕ ಆರೋಗ್ಯ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.ವಾರ್ಡ್‌ನ ಯಾವ ರಸ್ತೆಗಳಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು  ಗುರುತಿಸಲು ಅಲ್ಲಿನ ಎಲ್ಲ ನಿವಾಸಿಗಳ ಗಂಟಲದ್ರವ ಸಂಗ್ರಹಿಸಿ ಪರೀಕ್ಷೆಗೆ  ಒಳಪಡಿಸಲಿದ್ದೇವೆ. ಸೋಮವಾರದಿಂದಲೇ ಈ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಗಂಟಲದ್ರವ ಸಂಗ್ರಹಿಸುವ ಕಿಯೋಸ್ಕ್‌ಗಳನ್ನು ಬೇರೆ ಕಡೆಗಳಿಂದ ತರಿಸಿಕೊಳ್ಳುವಾಗ ವಿಳಂಬವಾಯಿತು. ಬುಧವಾರದಿಂದ ಈ ಪ್ರಕ್ರಿಯೆ ಪ್ರಾರಂಭ ಮಾಡಲಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಸರ್ಕಾರದಿಂದ ಈ ವಾರ್ಡ್‌ನಲ್ಲಿ ವ್ಯಾಪಕ ಆರೋಗ್ಯ ತಪಾಸಣೆ ನಡೆಸಲು ಅನುಮತಿ ದೊರೆತಿದೆ. ಇಲ್ಲಿನ ಜನರ ಗಂಟಲದ್ರವ ಸಂಗ್ರಹಿಸಿ ಸಂಬಂಧಪಟ್ಟ ಪ್ರಯೋಗಾಲಯಗಳಿಗೆ ಕಳುಹಿಸಲು ಬೇಕಾದ ಕಿಟ್ ಗಳನ್ನು ಸರ್ಕಾರವೇ ಪೂರೈಸಿದೆ ಎಂದಿದ್ದಾರೆ.