ಬೆಂಗಳೂರು, ಜ 27 : ಕೇಂದ್ರ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಅಧೀನಕ್ಕೊಳಪಟ್ಟಿರುವ ಭಾರತೀಯ ಕಂಪೆನಿ ಸೆಕ್ರೆಟರಿಗಳ ಇನ್ಸ್ಟಿಟ್ಯೂಟ್ ನ 2020 – 21 ನೇ ಸಾಲಿನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಎಸ್. ಆಶಿಶ್ ಗರ್ಗ್ ಹಾಗೂ ಉಪಾಧ್ಯಕ್ಷರಾಗಿ ಬೆಂಗಳೂರಿನ ಸಿ.ಎಸ್. ನಾಗೇಂದ್ರ ಡಿ. ರಾವ್ ಆಯ್ಕೆಯಾಗಿದ್ದಾರೆ.
ಸುದೀರ್ಘ 23 ವರ್ಷಗಳ ನಂತರ ಬೆಂಗಳೂರಿನ ಐಸಿಎಸ್ಐ ಸಂಸ್ಥೆಯ ಉಪಾಧ್ಯಕ್ಷರಾಗಿ ಸಿ.ಎಸ್ ನಾಗೇಂದ್ರ ರಾವ್ ಅವರು ಆಯ್ಕೆಯಾಗಿದ್ದು, ಈ ಬೆಳವಣಿಗೆ ಬೆಂಗಳೂರು ಚಾಪ್ಟರ್ ನ ಎಲ್ಲಾ ಸದಸ್ಯರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಬೆಂಗಳೂರಿನ ಐಸಿಎಸ್ಐ ಅಧ್ಯಕ್ಷ ವಿವೇಕ್ ಹೆಗ್ಡೆ ಹೇಳಿದ್ದಾರೆ.
ಸಿ.ಎಸ್. ಆಶಿಶ್ ಗರ್ಗ್ ಅವರು ಐಸಿಎಸ್ಐ ನ ಉಪಾಧ್ಯಕ್ಷರಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಕಾರ್ಪೋರೆಟ್ ಕಾನೂನು, ಸಾಂಸ್ಥಿಕ ಪುನಾರಚನೆ, ಕಾರ್ಪೋರೇಟ್ ವಲಯದ ಹಲವು ವಿಭಾಗದಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅಪಾರ ಅನುಭವ ಹೊಂದಿದ್ದಾರೆ.
ಉಪಾಧ್ಯಕ್ಷರಾಗಿರುವ ಸಿ.ಎಸ್. ನಾಗೇಂದ್ರ ಡಿ. ರಾವ್, 15 ವರ್ಷಗಳ ಕಾಲ ಕಾರ್ಪೋರೇಟ್ ಮತ್ತು ಭದ್ರತಾ ಕಾನೂನು, ಬಂಡವಾಳ ಮಾರುಕಟ್ಟೆ, ವ್ಯಾಪಾರ ವಹಿವಾಟು ಯೋಜನೆ, ಹೂಡಿಕೆ ಕಾರ್ಯತಂತ್ರ, ಹೂಡಿಕೆ ಯೋಜನೆ ವಿಷಯಗಳಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಐಸಿಎಸ್ಐ ನ ಬೆಂಗಳೂರು ವಿಭಾಗದಲ್ಲಿ ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.