ಲೋಕದರ್ಶನ ವರದಿ
ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ಹಾವೇರಿ 17: ರಾಜ್ಯದಲ್ಲೇ ಹಾವೇರಿ ಹಾಲು ಒಕ್ಕೂಟ ಮಾದರಿ ಒಕ್ಕೂಟ ಮಾಡಲು ಎಲ್ಲರೂ ಸಮನ್ವಯದಿಂದ ಹಾಗೂ ಜವಾಬ್ದಾರಿಯಿಂದ ಒಟ್ಟಾಗಿ ಕೆಲಸಮಾಡಬೇಕು. ಆರಂಭದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರ ಸದಾ ಒಕ್ಕೂಟದ ಜೊತೆಗೆ ಇರುತ್ತದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಹೇಳಿದರು.
ಸೋಮವಾರ ಹಾವೇರಿ ಹಾಲು ಒಕ್ಕೂಟಕ್ಕೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶುಭ ಕೋರಿ ಮಾತನಾಡಿದ ಅವರು, ಒಕ್ಕೂಟದ ಅಭಿವೃದ್ಧಿಗೆ ಎಲ್ಲರೂ ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಹಾವೇರಿ ಸಹಕಾರ ಹಾಲು ಒಕ್ಕೂಟವು ಜಿಲ್ಲೆಯ ಎಂಟು ತಾಲೂಕುಗಳಿಂದ ಹಾಲು ಶೇಖರಣೆ ಮಾಡುತ್ತಿದೆ. 535 ಸಂಘಗಳು ನೋಂದಣಿಯಾಗಿದ್ದು, 442 ಸಂಘಗಳು ಕಾರ್ಯನಿರ್ವಹಿಸುತ್ತಿದೆ ಹಾಗೂ 120 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಎಂದರು.
ದಿನಾಂಕ 28-8-2021 ರಂದು ಸರ್ಕಾರದ ರೂ.35 ಕೋಟಿ, ಕಹಾಮದಿಂದ ರೂ.ಐದಕೋಟಿ ಒಕ್ಕೂಟದಿಂಸದ ರೂ. ಐದು ಕೋಟಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ರೂ.65 ಕೋಟಿ ಸೇರಿ ಒಟ್ಟು ರೂ.110 ಕೋಟಿ ಅನುದಾನದಲ್ಲಿ ಜಂಗಮನಕೊಪ್ಪದಲ್ಲಿ ಯುಎಚ್‌ಟಿ ಹಾಲು ಸಂಸ್ಕರಣಾ ಘಟಕವನ್ನು ಪಿಪಿಪಿ ಮಾದರಿಯಡಿ ಎಸ್.ಕೆ.ಎ ಫುಡ್ಸ್ ಇವರೊಂದಿಗೆ 18 ವರ್ಷಗಳ ಕಾಲ ತ್ರಿಪಕ್ಷೀಯ ಒಪ್ಪಂದಂತೆ ಕಾರ್ಯಾಚರಣೆ ಮಾಡಲಾಗಿದೆ ಹಾಗೂ ಒಂದು ಲಕ್ಷ ಲೀಟರ್ ಸಾಮರ್ಥ್ಯ ಹೊಂದಿದೆ. ಏಪ್ರಿಲ್ 2022 ರಿಂದ ತನ್ನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಪ್ರತ್ಯಕವಾಗಿ ಆರಂಭಿಸಿದೆ. ಜಿಲ್ಲೆಯ ಎಂಟು ತಾಲೂಕುಗಳಿಂದ ಹಾಲು ಶೇಖರಣೆ ಮಾಡಲಾಗುತ್ತಿದೆ ಎಂದರು.
1.33 ಲಕ್ಷ ಲೀ.ಹಾಲು ಶೇಖರಣೆ: ಪ್ರಸಕ್ತ ಮಾರ್ಚ್-2025 ಮಾಹೆಯಿಂದ ಹಾವೇರಿ- 17,435 ಲೀ., ಬ್ಯಾಡಗಿ-14,263ಲೀ., ಹಾನಗಲ್-14,838 ಲೀ., ರಾಣೇಬೆನ್ನೂರು-17,577 ಲೀ., ಹಿರೇಕೆರೂರು-31,037 ಲೀ., ರಟ್ಟಿಹಳ್ಳಿ-20,717 ಲೀ., ಶಿಗ್ಗಾಂವ-8,959 ಲೀ., ಹಾಗೂ ಸವಣೂರ ತಾಲೂಕಿನಲ್ಲಿ 9,152 ಲೀಟರ್ ಸೇರಿ 1,33, 972 ಲೀಟರ್ ಹಾಲು ಶೇಖರಣೆಯಾಗುತ್ತಿದೆ ಎಂದು ಹೇಳಿದರು.
ಹಾಲು ಹಂಚಿಕೆ: ಯುಎಚ್‌ಟಿ ಘಟಕಕ್ಕೆ-50 ಸಾವಿರ ಲೀಟರ್, ದ್ರವರೂಪದ ಹಾಲು ಮಾರಾಟ 21 ಸಾವಿರ ಲೀಟರ್, ಕೇರಳ ರಾಜ್ಯಕ್ಕೆ 25 ಸಾವಿರ ಲೀಟರ್, ಮದರ್ ಡೇರಿಗೆ 10 ಸಾವಿರ ಲೀ. ಹಾಗೂ ಕ್ಷೀರಭಾಗ್ಯ ಹಾಲಿನ ಪುಡಿ ಪರಿವರ್ತನೆಗೆ(ಧಾರವಾಡಕ್ಕೆ) 30 ಸಾವಿರ ಲೀಟರ್ ಸರಬರಾಜು ಮಾಡಲಾಗುತ್ತಿದೆ ಎಂದರು.
ಹಾಲಿನ ದರ: ಆಕಳ ಹಾಲಿಗೆ ಒಕ್ಕೂಟದಿಂದ ಸಂಘಗಳಿಗೆ ಪ್ರತಿ ಲೀ.ರೂ.31.55 ರಂತೆ ಹಾಗೂ ಸಂಘಗಳಿಂದ ಉತ್ಪಾದಕರಿಗೆ ರೂ.30.50ನಂತೆ ದರ ನೀಡಲಾಗುತ್ತದೆ. ಎಮ್ಮೆ ಹಾಲಿಗೆ ಒಕ್ಕೂಟದಿಂದ ಸಂಘಗಳಿಗೆ ಪ್ರತಿ ಲೀ.ರೂ.44.05 ರಂತೆ ಹಾಗೂ ಸಂಘಗಳಿಂದ ಉತ್ಪಾದಕರಿಗೆ ರೂ.43ರಂತೆ ದರ ನೀಡಲಾಗುತ್ತದೆ ಎಂದು ಹೇಳಿದರು.
442 ಸಂಘಗಳು: ಜಿಲ್ಲೆಯಲ್ಲಿ 442 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 65,750 ಸದಸ್ಯರಿದ್ದಾರೆ ಹಾಗೂ 21,770 ಹಾಲು ಉತ್ಪಾದಕರಿದ್ದು, 1,33,927 ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿದೆ. 817 ಮೆಟ್ರಿಕ್ ಟನ್ ಪಶು ಆಹಾರ ಮಾರಾಟ ಮಾಡಲಾಗಿದೆ. 116 ಕೃತಕ ಗರ್ಭಧಾರಣೆ ಕೇಂದ್ರಗಳು ಕಾರ್ಯನಿರ್ವಸುತ್ತಿವೆ ಎಂದರು.
ಹಾಲಿ ಬಟವಡೆಯನ್ನು 10 ದಿನಗಳಿಗೊಮ್ಮೆ ಪಾವತಿಮಾಡುತ್ತಿದ್ದು, ರೂ.4.50 ಕೋಟಿ ಆಗಿರುತ್ತದೆ. ದಿನಾಂಕ 11-02-2025 ರಿಂದ 10-03-2025ರವರೆಗೆ ರೂ.13.50 ಕೋಟಿ ಬಟವಡೆ ಬಾಕಿ ಬಿಲ್ ಇದೆ. ಕ್ಷೀರಭಾಗ್ಯ ಯೋಜನೆಯಡಿ ಸರಬರಾಜಾಗಿರುವ ಹಾಲಿನ ಪುಡಿಯ ಬಾಕಿ ಮೊತ್ತ ರೂ.13 ಕೋಟಿ ಬರಬೇಕಾಗಿದೆ.
ರೂ.20 ಕೋಟಿ ಅನುದಾನ: ಮೆಗಾ ಡೇರಿ ಹಾಗೂ ಆಡಳಿತ ಕಚೇರಿ ಕಟ್ಟಡಗಳ ಕಾಮಗಾರಿಗಳ ಯೋಜನೆ ಪೂರ್ಣಗೊಳಿಸಲು ಸರ್ಕಾರದಿಂದ ರೂ.20 ಕೋಟಿ ಮೊತ್ತವನ್ನು ಪೂರಕ ಬಜೆಟ್‌ನಲ್ಲಿ ಅನುಮೋದನೆ ಪಡೆಯಬೇಕಾಗಿದೆ ಎಂದರು.
ಕ್ಷೀರಭಾಗ್ಯ ಯೋಜನೆಯಡಿ ಪೂರೈಕೆ ಮಾಡುತ್ತಿರುವ ಹಾಲಿನ ಪುಡಿ ಬದಲು ಯುಎಚ್‌ಟಿ ಹಾಲನ್ನು ಆಂಧ್ರ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನೀಡುತ್ತಿರುವ ಮಾದರಿಯಲ್ಲಿ ಹಾವೇರಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಯುಎಚ್‌ಟಿ ಹಾಲನ್ನು ನೀಡುವ ಬಗ್ಗೆ ಸರ್ಕಾರಿದಿಂದ ಅನುಮೋದನೆ ಪಡೆದು ಕಾರ್ಯರೂಪಕ್ಕೆ ತಂದಲ್ಲಿ ಡಬ್ಯೂ ಎಂ ಪಿಯಲ್ಲಿ ಆಗುವ ನಷ್ಟವನ್ನು ತಗ್ಗಿಸಬಹುದಾಗಿದೆ ಎಂದು ಹೇಳಿದರು.
ಅವಿರೋಧ ಆಯ್ಕೆ: ಹಾವೇರಿ ಹಾಲು ಒಕ್ಕೂಟಕ್ಕೆ ಅಧ್ಯಕ್ಷರಾಗಿ ರಾಣೇಬೆನ್ನೂರು ತಾಲೂಕು ಹಿರೇಮಾಗನೂರಿನ ಮಂಜನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಹಿರೇಕೆರೂರು ತಾಲೂಕು ದೀವಗಿಹಳ್ಳಿಯ ಉಜ್ಜನಗೌಡ ಮಾನವಿನತೋಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಶಾಸಕರಾದ ಶ್ರೀನಿವಾಸ ಮಾನೆ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಯಾಸಿರ್ ಅಹ್ಮದ್‌ಖಾನ್ ಪಠಾಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ.ಹಿರೇಮಠ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಕೆ.ಸಿ.ಸಿಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ,ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಎಚ್.ಟಿ.ಅಶೋಕಗೌಡ, ನಾಮನಿರ್ದೇಶಿತ ಸದಸ್ಯ ಶಂಕರಗೌಡ ಪಾಟೀಲ ಹಾಗೂ ಒಕ್ಕೂಟದ ಎಲ್ಲ ಸದಸ್ಯರು ಇತರರು ಉಪಸ್ಥಿತರಿದ್ದರು.