ಹಾಜಿಪುರ್ ಪ್ರಕರಣ: ಸರಣಿ ಅತ್ಯಾಚಾರ,ಕೊಲೆ ಪಾತಕನಿಗೆ ಮರಣದಂಡನೆ ಶಿಕ್ಷೆ

ಹೈದರಾಬಾದ್, ಫೆ 7, ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಾಜಿಪುರ ಗ್ರಾಮದಲ್ಲಿ ನಡೆದಿದ್ದ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಸಂತ್ರಸ್ತರಿಗೆ ಕೊನೆಗೂ ನ್ಯಾಯ ಸಿಕ್ಕಿದೆ ಎಂದು ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮಹೇಂದರ್ ರೆಡ್ಡಿ ತಿಳಿಸಿದ್ದಾರೆ. ತೆಲಂಗಾಣ ರಾಜ್ಯದ ಯಾದರಿ ಭುವನಗಿರಿ ಜಿಲ್ಲೆಯ ಹಾಜಿಪುರ ಗ್ರಾಮದಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಪ್ರಕರಣದಲ್ಲಿ ಮರ್ರಿ ಶ್ರೀನಿವಾಸ್ ರೆಡ್ಡಿ ತಪ್ಪಿತಸ್ಥನೆಂದು ಘೋಷಿಸಿ ನಲ್ಗೊಂಡ ನ್ಯಾಯಾಲಯ ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. 

ಸರಣಿ ಅತ್ಯಾಚಾರ ಮತ್ತು ಕೊಲೆ ಪಾತಕನಿಗೆ ಎರಡು ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ಹಾಗೂ ಇನ್ನೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಮಹೇಂದರ್ ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನ್ಯಾಯದ ಹಿತದೃಷ್ಟಿಯಿಂದ ಪ್ರಾಸಿಕ್ಯೂಷನ್‌ ಪರವಾಗಿ  ದೃಢವಾಗಿ ನಿಂತು ನ್ಯಾಯಾಲಯದಲ್ಲಿ ಸಾಕ್ಷ್ಯಗಳನ್ನು ಒದಗಿಸಿದ ಎಲ್ಲ ಸಾಕ್ಷಿಗಳು, ಸಂತ್ರಸ್ತರ ಕುಟುಂಬ ಸದಸ್ಯರು ಮತ್ತು ನಾಗರಿಕ ಸಮಾಜಕ್ಕೆ ಪೊಲೀಸ್ ಇಲಾಖೆ ಕೃತಜ್ಞತೆಯನ್ನು ಸಲ್ಲಿಸುತ್ತದೆ. ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದಕ್ಕಾಗಿ ನ್ಯಾಯಾಲಯಕ್ಕೆ ಧನ್ಯವಾದಗಳು ಎಂದು ಡಿಜೆಪಿ ರೆಡ್ಡಿ ಹೇಳಿದ್ದಾರೆ.  

ಸಾಕ್ಷ್ಯಗಳನ್ನು ಸಂಗ್ರಹಿಸಿ ಮತ್ತು ತನಿಖೆಯನ್ನು ವೃತ್ತಿಪರ ರೀತಿಯಲ್ಲಿ ಪೂರ್ಣಗೊಳಿಸಿರುವ ಹಾಗೂ ವಿಚಾರಣೆಯನ್ನು ಪೂರ್ಣಗೊಳಿಸಲು ಪ್ರಾಸಿಕ್ಯೂಷನ್‌ಗೆ ಸಹಾಯ ಮಾಡಿದ ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಗವತ್, ಯದಾದ್ರಿ ಡಿಸಿಪಿ ನಾರಾಯಣ ರೆಡ್ಡಿ, ಭೋಂಗೀರ್ ಎಸಿಪಿ ಭುಜಂಗ ರಾವ್ ಮತ್ತು ಅವರ ಇಡೀ ಅಧಿಕಾರಿಗಳ ತಂಡವನ್ನು ಡಿಜಿಪಿ ಅಭಿನಂದಿಸಿದ್ದಾರೆ. ಎಲ್ಲಾ ಘೋರ ಅಪರಾಧಗಳನ್ನು ವೃತ್ತಿಪರವಾಗಿ ತನಿಖೆ ಮಾಡಲು ಮತ್ತು ಎಲ್ಲಾ ಘೋರ ಅಪರಾಧಿಗಳಿಗೆ ತ್ವರಿತವಾಗಿ ಶಿಕ್ಷೆಯಾಗಲು ಪೊಲೀಸ್ ಇಲಾಖೆ ಬದ್ಧವಾಗಿದೆ ತೆಲಂಗಾಣ ಜನತೆಗೆ ಭರವಸೆ ನೀಡಿದ್ದೇವೆ. ಮಹಿಳೆಯರ ಸುರಕ್ಷತೆಗೆ ತೆಲಂಗಾಣ ಪೊಲೀಸ್  ಬದ್ಧವಾಗಿದೆ ಎಂದು ಡಿಜಿಪಿ ರೆಡ್ಡಿ ಹೇಳಿದ್ದಾರೆ.