ಕೊರೋನಾ ಸೋಂಕು ಹಿನ್ನೆಲೆ: ಇಂದಿರಾ ಕ್ಯಾಂಟೀನ್‌ಗೆ ಮಾರ್ಗಸೂಚಿ

ಬೆಂಗಳೂರು, ಮಾ.28, ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ವಿತರಿಸುವ ಸಂಬಂಧ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇಂದಿರಾ ಕ್ಯಾಂಟೀನ್‌ಗಳು ಬೆಳಗ್ಗೆ 7.30ರಿಂದ 10 ಗಂಟೆ ಹಾಗೂ ಮಧ್ಯಾಹ್ನ 12.30ರಿಂದ 3 ಮತ್ತು ರಾತ್ರಿ 7.30ರಿಂದ9 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ. ಈ ನಿಗದಿತ ವೇಳೆಯಲ್ಲಿ ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಮತ್ತು ಬಡ ನಾಗರಿಕರಿಗೆ ಉಚಿತವಾಗಿ ಆಹಾರ ಪೂರೈಸಲಾಗುತ್ತದೆ. ಫಲಾನುಭವಿಗಳು ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಸೇವಿಸುವ ಮೊದಲು ಮತ್ತು ನಂತರ ಕ್ಯಾಂಟೀನ್‌ಗಳಲ್ಲಿ ಲಭ್ಯವಿರುವ ಸ್ವಚ್ಛತೆ ಮತ್ತು ನೈರ್ಮಲ್ಯತೆ ಕಾಪಾಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆಹಾರ ವಿತರಿಸುವ ಸಿಬ್ಬಂದಿಗಳು ಮಾಸ್ಕ್‌ ಮತ್ತು ಗ್ಲೌವ್ಸ್ ಗಳನ್ನು ಕಡ್ಡಾಯವಾಗಿ ಧರಿಸಲು, ಸಾಬೂನು ಹಾಗೂ ಸ್ಯಾನಿಟೈಸರ್‌ಗಳನ್ನು ಕ್ಯಾಂಟೀನ್‌ಗಳಲ್ಲಿ ಲಭ್ಯವಿರುವಂತೆ ಇರಿಸಬೇಕು. ಆಹಾರದ ಕೂಪನ್ ಪಡೆಯುವ ಸಂದರ್ಭದಲ್ಲಿ ನಾಗರಿಕರು ಕನಿಷ್ಠ 1 ಮೀಟರ್ ಅಂತರದಲ್ಲಿ ಸರದಿ ಸಾಲಿನಲ್ಲಿ ನಿಲ್ಲುವಂತೆ ಮಾಸ್ಕ್ ಧರಿಸುವಂತೆ ಅಥವಾ ಸ್ವಚ್ಛ ಬಟ್ಟೆಯಿಂದ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಲು ತಿಳಿವಳಿಕೆ ನೀಡುವ ಬಗ್ಗೆ ಹಾಗೂ ಕೋವಿಡ್ 19 ಸೋಂಕು ಕುರಿತು ಸಾರ್ವಜನಿಕಲ್ಲಿ ಮುಂಜಾಗೃತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸರ್ಕಾರ ಸೂಚಿಸಿದೆ.