ಗುಡ್ಡಳ್ಳಿಗೆ ಸಿಕ್ತು ಸಂಚಾರ ಸಾಧನ : ಜಿಲ್ಲಾಧಿಕಾರಿಯ ಸೂಚನೆ ಪಾಲಿಸಿದ ನಗರಸಭೆ

Guddalli gets transportation facility: Municipal Council follows the instructions of the District Co

ಕಾರವಾರ 11: ನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಗುಡ್ಡಳ್ಳಿಗೆ ನಗರಸಭೆಯ "ನಗರ ರಕ್ಷಕ" ವಾಹನ ತೆರಳಿ ಇಲ್ಲಿನ ಜನರನ್ನು ದಿನವೂ ನಗರಕ್ಕೆ ಉಚಿತವಾಗಿ ಕರೆ ತರುವ ಕಾರ್ಯ ಆರಂಭಿಸಿದೆ. ನಗರದ ಪಕ್ಕವೇ ಇದ್ದು, 31 ನೇ ವಾರ್ಡನ ಭಾಗವಾದರೂ , ಅರಣ್ಯ ಪ್ರದೇಶದ ಗುಡ್ಡದಲ್ಲಿ 35 ಕುಟುಂಬಗಳ ಜನ ವಸತಿ ಇರುವ ಪ್ರದೇಶವಾದ ಕಾರಣ ಇಲ್ಲಿಗೆ ರಸ್ತೆ ಸೌಕರ್ಯವೂ ಇಲ್ಲ. ವಾಹನ ಸಂಪರ್ಕ ಸೌಕರ್ಯವೂ ಇಲ್ಲದೆ, 7 ದಶಕಗಳಿಂದ ರಸ್ತೆ ಹಾಗೂ ಸರ್ಕಾರದ ಸಂಪರ್ಕ ಸೌಲಭ್ಯ ಇಲ್ಲದೆ ಉಳಿಯುವಂತಾಗಿತ್ತು. 

ಸ್ವತಃ ದ್ವಿಚಕ್ರವಾಹನ ಹೊಂದಿದ ನಾಲ್ಕು ಕುಟುಂದವರು ಮಾತ್ರ ನಗರಕ್ಕೆ ಬರಲು ವಾಹನ ಬಳಸುತ್ತಿದ್ದರು. ಉಳಿದಂತೆ ಬಹುತೇಕ ಎಲ್ಲರೂ ಕಾಲ್ನಡಿಗೆಯಲ್ಲಿ ನಗರಕ್ಕೆ ಬರುವುದು ವಾಡಿಕೆ. ಈ ಸಮಸ್ಯೆ ಕಂಡ ನಗರಸಭೆ, ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಸರಕು-ಸಾಮಗ್ರಿಗಳ ಸಾಗಾಣಿಕೆಗೆ ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ನಗರಸಭೆಯ ವಾಹನ ವ್ಯವಸ್ಥೆ ಇದೀಗ ನೆರವಾಗಿದೆ.  

ಸಂಚಾರದ್ದೇ ಸಮಸ್ಯೆ: ನಗರ ವ್ಯಾಪ್ತಿಯ ವಾರ್ಡಗೆ ಸೇರಿರುವಗುಡ್ಡಳ್ಳಿ ಮಜಿರೆಗೆ ತೆರಳಲು ಈವರೆಗೂ ಕಾಲು ದಾರಿ ಇದ್ದ ಕಾರಣ ಕಾಯಿಲೆಯಿಂದ ಬಳಲುತ್ತಿರುವವರು, ಆಸ್ಪತ್ರೆ ಸೇರಲು ಸಹ ಸಮಸ್ಯೆ ಅನುಭವಿಸುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿ ನಗರದ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಮೃತದೇಹ, ಗುಡ್ಡೆಹಳ್ಳಿಗೆ ಶವ ಸಾಗಿಸಲು ರಸ್ತೆ ಇಲ್ಲದ ಕಾರಣ ಅವರ ಸಂಬಂಧಿಕರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. 

ಜಿಲ್ಲಾಧಿಕಾರಿಗೆ ಸಮಸ್ಯೆ ನಿವೇದನೆ: ಜಿಲ್ಲಾಧಿಕಾರಿಯಾಗಿ ಆಗತಾನೆ ಆಗಮಿಸಿದ್ದ ಕೆ . ಲಕ್ಷ್ಮೀಪ್ರಿಯಾ ಅವರನ್ನು ಗುಡ್ಡಳ್ಳಿಯ ಜನ ಭೇಟಿ ಮಾಡಿ ಊರಿನ ಬಗ್ಗೆ ಹೇಳಿಕೊಂಡಿದ್ದರು. ಅವರ ಮನವಿ ಸ್ವೀಕರಿಸಿದ ಲಕ್ಷ್ಮೀಪ್ರಿಯಾ ಇದೇ ವರ್ಷ ಅರಂಭದ ಜನವರಿ 17 ರಂದು ದಿಢೀರ್ ಆಗಿ ಆ ಊರಿಗೆ ಭೇಟಿ ನೀಡಿದ್ದರು. ಓಡಾಟಕ್ಕೆ ವಾಹನ ಸಂಪರ್ಕ ವಾಹನ ನೀಡುವ ಭರವಸೆ ನೀಡಿದ್ದರು. ಜನರ ಬೇಡಿಕೆ ಅನ್ವಯ ಊರಿಗೆ ರಸ್ತೆ ಸಂಪರ್ಕ ಕಲ್ಪಿಸುವುದಕ್ಕಾಗಿ ಎಲ್ಲಾ ಬಗೆಯ ಪ್ರಯತ್ನ ನಡೆಸಿದರು. ಅದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದೇ ಇದ್ದರೂ ಜನರ ಓಡಾಟಕ್ಕೆ ಅನುಕೂಲವಾಗುವಂತೆ ನಗರಸಭೆ ವಾಹನ ಓಡಾಟಕ್ಕೆ ಸೂಚನೆ ನೀಡಿದರು. ಜೊತೆಗೆ ಅಲ್ಲಿನ ಶಾಲೆಗೆ ಹೊಸ ರೂಪ ನೀಡಲು ಸಂಕಲ್ಪಿಸಿದರು. ಮುಖ್ಯವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಮುನ್ನಚ್ಚರಿಕೆವಹಿಸಿದರು.  

ಇದೆಲ್ಲದರ ಪರಿಣಾಮವಾಗಿ ನಗರಸಭೆ ಪೌರಾಯುಕ್ತ ಜಗದೀಶ ಹುಲಿಗಜ್ಜೆ ಹಂತ ಹಂತವಾಗಿ ಗುಡ್ಡಳ್ಳಿ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿದ್ದಾರೆ. ರಸ್ತೆಯ ಕಾಮಗಾರಿ ಈಗಾಗಲೇ ಸಾಕಷ್ಟು ನಡೆದಿದೆ. ರಸ್ತೆಯ ತಗ್ಗುಗಳನ್ನು ಸಮತಟ್ಟು ಮಾಡಿದರು. ಲೋಕೋಪಯೋಗಿ ಇಲಾಖೆಯವರನ್ನು ಸಂಪರ್ಕಿಸಿ ಮಂಜೂರಿಯಾದ 1.2 ಕಿಮೀ ದೂರದವರೆಗಿನ ರಸ್ತೆ ನಿರ್ಮಾಣವನ್ನು ನೆನಪಿಸಿದರು. ಮುಂದಿನ ಹಾದಿಯಲ್ಲಿ ಅರಣ್ಯ ನಾಶವಾಗದಂತೆ ಎಚ್ಚರವಹಿಸಿ ನಗರಸಭೆಯ ಬುಲೇರೋ ವಾಹನ ಓಡಾಟಕ್ಕೆ ಅಗತ್ಯವಿರುವಷ್ಟು ರಸ್ತೆ ಮಾಡಿಕೊಂಡರು. ಇದರೊಂದಿಗೆ ನಗರಸಭೆ ಅನುದಾನದಲ್ಲಿ ಶಾಲೆಗೆ ಬಣ್ಣ ಬಡಿದರು.  

ಜನರ ಅನುಕೂಲಕ್ಕಾಗಿ ಅಲ್ಲಿದ್ದ ಬಾವಿ ಸ್ವಚ್ಛಗೊಳಿಸಿ ಕುಡಿಯುವ ನೀರಿನ ಸಮಸ್ಯೆ ದೂರ ಮಾಡಿದರು. ಸದ್ಯ ನಿತ್ಯ ಬೆಳಗ್ಗೆ 7 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ನಗರಸಭೆ 'ನಗರ ರಕ್ಷಕ ವಾಹನ' ಗುಡ್ಡಳ್ಳಿಗೆ ಹೋಗಿ ಬರಲಿದೆ. ಇದಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ತುರ್ತು ಸಮಯದಲ್ಲಿಯೂ ಆ ವಾಹನವನ್ನು ಗುಡ್ಡಳ್ಳಿ ಜನರ ಬಳಕೆಗೆ ನೀಡಲು ಕಾರವಾರ ನಗರಸಭೆ ನಿರ್ಧರಿಸಿತು.ನಗರಸಭೆಯ ವಾಹನ ಗುಡ್ಡೆಹಳ್ಳಿಯಲ್ಲಿ ಕಂಡ ಜನರು ಸಂತಸ ವ್ಯಕ್ತಪಡಿಸಿದ್ದಾರೆ.