ಗ್ಯಾರಂಟಿ ಯೋಜನೆಗಳಿಂದ ಫಲನಾಭವಿಗಳಲ್ಲಿ ಅಭಿವೃದ್ಧಿ ಬರವಸೆ ಮೂಡಿಸಿದೆ: ಅಧ್ಯಕ್ಷ ಎಸ್‌.ಆರ್‌.ಪಾಟೀಲ

Guarantee schemes have created a development gap among beneficiaries: President S.R. Patil

ಲೋಕದರ್ಶನ ವರದಿ 

ಗ್ಯಾರಂಟಿ ಯೋಜನೆಗಳಿಂದ ಫಲನಾಭವಿಗಳಲ್ಲಿ ಅಭಿವೃದ್ಧಿ ಬರವಸೆ ಮೂಡಿಸಿದೆ:       ಅಧ್ಯಕ್ಷ ಎಸ್‌.ಆರ್‌.ಪಾಟೀಲ 


ಧಾರವಾಡ 05 : ಜಿಲ್ಲೆಯಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಉತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿವೆ. ಯುವನಿಧಿ, ಗೃಹಲಕ್ಷ್ಮಿ ಯೋಜನೆಯ ಬಾಕಿ ಅರ್ಜಿಗಳನ್ನು ಸೂಕ್ತವಾಗಿ ಪರೀಶೀಲಿಸಿ, ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಅವರು ಹೇಳಿದರು.  

ಅವರು ಇಂದು (ಮೇ.5) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿ ಪರೀಶೀಲನಾ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಜಾಗೃತಿ ವಹಿಸಬೇಕು ಮತ್ತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಕೇಳಿದಲ್ಲಿ ಸಹಾನುಭೂತಿಯಿಂದ ನೀಡಬೇಕೆಂದು ಹೇಳಿದರು.   

ನ್ಯಾಯ ಬೆಲೆ ಅಂಗಡಿಯವರು ಅನ್ನಭಾಗ್ಯ ಯೋಜನೆಯಡಿಯ ಸೌಲಭ್ಯಗಳ ಬಗ್ಗೆ ಸರ್ಕಾರದ ಮಾಹಿತಿಯ ಫಲಕಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಪಡಿತರ ಚೀಟಿ ಹೊಂದಿದ ಅಂಗವಿಕಲರು ಹಾಗೂ ವೃದ್ಧರಿಗೆ ಮನೆಗೆ ಹೋಗಿ ಅಕ್ಕಿ ನೀಡಲು ತಿಳಿಸಿದರು. ಗ್ರಾಮಗಳಲ್ಲಿ ಒಂದು ವಾರದವರೆಗೆ ಬಾಕಿ ಉಳಿದ ಅಕ್ಕಿ ವಿತರಿಸಲು ಸಲಹೆ ಕೊಟ್ಟರು. 

ಶಕ್ತಿ ಯೋಜನೆ ಅಡಿಯಲ್ಲಿ ಬರುವ ಸಾರಿಗೆ ಬಸ್ಸುಗಳನ್ನು ಕೋರಿಕೆಯ ನಿಲ್ಲುಗಡೆ ಇದ್ದಲ್ಲಿ, ಅತಿ ಹೆಚ್ಚು ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ಬಸ್ಸುಗಳನ್ನು ನಿಲ್ಲಿಸಬೇಕು ಎಂದು ಹೇಳಿದರು. ಹಾಗೆ ಕೆಲವೊಂದು ಹಳ್ಳಿಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಬಸ್ಸಿನ ವ್ಯವಸ್ಥೆ ಮಾಡಿ ಎಂದು ತಿಳಿಸಿದರು.  

ಗೃಹ ಜ್ಯೋತಿ ಯೋಜನೆಯಡಿ ಮಾರ್ಚ್‌ ತಿಂಗಳಲ್ಲಿ ಮಳೆ ಆದ ಕಾರಣ ವಿದ್ಯುತ್ ತಂತಿಗಳು ತುಂಡಾಗಿದ್ದಲ್ಲಿ ಅವುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ರೈತರಿಗೆ ತೊಂದರೆ ಆಗದ ಹಾಗೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಗೃಹಲಕ್ಷ್ಮಿ ಯೋಜನೆಯಡಿ ಇರುವ ಬಾಕಿ ಅರ್ಜಿಗಳನ್ನು ಪರೀಶೀಲಿಸಿದರು.  

ಯುವನಿಧಿ ಯೋಜನೆಯಡಿ ಬಾಕಿ ಇರುವ ಅರ್ಜಿಗಳನ್ನು ನಿಯಮಾನುಸಾರ ಪರೀಶೀಲಿಸಿ, ಬಾಕಿ ಇರುವ ಅಭ್ಯರ್ಥಿಗಳೊಂದಿಗೆ ಆದಷ್ಟು ಬೇಗನೆ  ಚರ್ಚಿಸಿ, ವಿಲೇವಾರಿ ಮಾಡಬೇಕು ಎಂದು ಅವರು ತಿಳಿಸಿದರು.  

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಪ್ರತಿ ಯೋಜನೆಯ ಪ್ರಗತಿ ಕುರಿತು ಮಾಹಿತಿ ಪಡೆದು, ಚರ್ಚಿಸಿದರು.  

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮುರಗಯ್ಯಾ ವಿರಕ್ತಮಠ, ಅರವಿಂದ ಏಗನಗೌಡರ, ಅಬ್ದುಲ್ ರಸೀದ ಬೋಳಾಯಿ, ರತ್ನಾ ತೇಗೂರಮಠ ವೇದಿಕೆಯಲ್ಲಿದ್ದರು.  

ಸಭೆಯಲ್ಲಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು, ಗ್ಯಾರಂಟಿ ಯೋಜನೆಗಳ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.  

ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್‌.ಮೂಗನೂರಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.