ಶ್ರೀನಗರದಲ್ಲಿ ಗ್ರೆನೇಡ್ ದಾಳಿ: ಓರ್ವ ಸಾವು, 20 ಮಂದಿಗೆ ಗಾಯ

ಶ್ರೀನಗರ, ನ.4:     ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಗ್ರೆನೇಡ್ ದಾಳಿಯಲ್ಲಿ ಓರ್ವ ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಶ್ರೀನಗರದ ಹರಿ ಸಿಂಗ್ ಹೈಸ್ಟ್ರೀಟ್ನಲ್ಲಿ ನಿಯೋಜಿಸಿದ್ದ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಶಂಕಿತ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆದಾಗ್ಯೂ, ಗ್ರೆನೇಡ್ ಗುರಿ ತಪ್ಪಿದೆ. ಅಲ್ಪ ದೂರದಲ್ಲಿ ಹೋಗಿ ಬಿದ್ದು, ಅಲ್ಲಿ ಸ್ಫೋಟಗೊಂಡಿದೆ. ಪರಿಣಾಮ 21 ಮಂದಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದಿಂದಾಗಿ ಸೃಷ್ಟಿಯಾದ ಗೊಂದಲದ ಸಮಯದಲ್ಲಿ ಶಂಕಿತ ಉಗ್ರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು, ಹೆಚ್ಚಿನ ಭದ್ರತಾ ಪಡೆಗಳನ್ನು ಈ ಪ್ರದೇಶಕ್ಕೆ ಕರೆಸಲಾಗಿದೆ. ಮತ್ತು ದಾಳಿಕೋರರನ್ನು ಬಂಧಿಸಲು ಬೃಹತ್ ಶೋಧ ಕಾರ್ಯ ಪ್ರಾರಂಭಿಸಲಾಗಿದೆ.