ಬೆಂಗಳೂರು, ಏ.2, ರಾಮನವಮಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ಗಣ್ಯರು ನಾಡಿನ ಜನತೆಗೆ ಶುಭ ಕೋರಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಗ್ಗೆ ಟ್ವೀಟ್ ಮಾಡಿ, ಕರ್ನಾಟಕದ ಜನತೆಗೆ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ಪ್ರಭು ಶ್ರೀರಾಮನ ತ್ಯಾಗ ಮತ್ತು ಸ್ಥಿತಪ್ರಜ್ಞತೆ ನಮಗೆಲ್ಲ ಆದರ್ಶವಾಗಲಿ. ಕೊರೊನ ನಿಯಂತ್ರಣಕ್ಕಾಗಿ ಎಲ್ಲ ರೀತಿಯ ಸಾರ್ವಜನಿಕ, ಧಾರ್ಮಿಕ ಆಚರಣೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರಾಮನವಮಿ ಆಚರಣೆ ತಮ್ಮ ಮನೆಗೆ ಸೀಮಿತವಾಗಿರಲಿ ಎಂದು ಕಳಕಳಿಯ ಮನವಿ.ಆದರ್ಶ ಪುರುಷನೆಂದೇ ಜನಮಾನಸದಲ್ಲಿ ಉಳಿದಿರುವ ಶ್ರೀರಾಮಚಂದ್ರನ ಜಯಂತಿಯಂದು ಮನೆಗಳಲ್ಲೇ ಉಳಿದು ಹಬ್ಬದ ಸಂಭ್ರಮ ಸವಿಯೋಣ. ನಾಡಿನ ನನ್ನ ಸಮಸ್ತ ಬಂಧುಗಳಿಗೆ ರಾಮನವಮಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ರಾಮನವಮಿ ಸರ್ವರಿಗೂ ಆರೋಗ್ಯದ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುವೆ. ನಮ್ಮೆಲ್ಲರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ವೈದ್ಯದೇವರಿಗೆ ಕೃತಜ್ಞತೆ ಸಲ್ಲಿಸಿ ಕೈಮುಗಿಯುವೆ. ಹಬ್ಬ ಸರಳವಾಗಿರಲಿ, ಮನೆಯೊಳಗೆಯೇ ಇರಲಿ ಎಂದು ಸಲಹೆ ನೀಡಿದ್ದಾರೆ.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ರಾಮನವಮಿಯ ಶುಭಾಶಯಗಳು. ರಾಮನವಮಿಯನ್ನು ಮನೆಯಲ್ಲೇ ಆಚರಿಸಿ ಸುರಕ್ಷಿತವಾಗಿರಿ ಎಂದು ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿ, ಚೈತ್ರಮಾಸ ಶುಕ್ಲಪಕ್ಷದ ಒಂಬತ್ತನೆಯ ದಿನವೇ ಶ್ರೀರಾಮನವಮಿ. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ, ಎಲ್ಲರಿಗೂ ಶ್ರೀರಾಮನವಮಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀರಾಮ ಎಲ್ಲರಿಗೂ ಸಂತೋಷ, ಆರೋಗ್ಯ, ಸಮೃದ್ಧಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ. ನಾಡಿಗೆ ಎದುರಾಗಿರುವ ಸಂಕಷ್ಟಗಳು ಶೀಘ್ರದಲ್ಲಿ ದೂರವಾಗಲಿ ಎಂದು ಎಲ್ಲ ಭಕ್ತರೂ ವಿಶೇಷ ಪೂಜೆ-ಪ್ರಾರ್ಥನೆಗಳನ್ನು ಸಲ್ಲಿಸಿ. ಎಲ್ಲರೂ ಮನೆಯಲ್ಲೇ ಇದ್ದು ಹಬ್ಬ ಆಚರಿಸಿ. ಶ್ರೀರಾಮನ ದಯೆ ಎಲ್ಲರ ಮೇಲಿರಲಿ ಎಂದು ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಶುಭಾಶಯಗಳು. ಈ ಬಾರಿಯ ಆಚರಣೆ ಮನೆಯಲ್ಲೇ ನಡೆಯಲಿ. ಭಗವಂತನ ಆಶೀರ್ವಾದ ನಮ್ಮ ನಾಡಿನ ಮೇಲಿರಲಿ ಎಂದು ನನ್ನ ಪ್ರಾರ್ಥನೆ. ಜೈ ಶ್ರೀ ರಾಮ್ ಎಂದು ಟ್ವೀಟ್ ಮಾಡಿದ್ದಾರೆ.