ಮುಧೋಳ 25: 2025 ಫೆಬ್ರುವರಿ ತಿಂಗಳ ಮಾಸಾಂತ್ಯದೊಳಗೆ ಮುಧೋಳದಲ್ಲಿ ರನ್ನ ಸಾಂಸ್ಕೃತಿಕ ವೈಭವ ಮಾಡಲು ನಿರ್ಧರಿಸಲಾಯಿತೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ರನ್ನ ಪ್ರತಿಷ್ಠಾನದ ನೂತನ ಸದಸ್ಯರ ಪ್ರಥಮ ಸಭೆಯ ಅಧ್ಯಕ್ಷತೆವಹಿಸಿ ರನ್ನ ಪ್ರತಿಷ್ಠಾನದ ಸದಸ್ಯರುಗಳ ಸುದೀರ್ಘವಾಗಿ ಜೊತೆ ಚರ್ಚೆ ಮಾಡಿದ ಬಳಿಕ ಈ ತಿರ್ಮಾನ ಕೈಗೊಳ್ಳಲಾಯಿತೆಂದು ತಿಳಿಸಿದರು.
ಮೈಸೂರು ದಸರಾ ಮಾದರಿಯಂತೆ ರನ್ನ ವೈಭವ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು, ರನ್ನ ವೈಭವದಲ್ಲಿ ರನ್ನನ ಕುರಿತು ಮತ್ತು ಜಾನಪದ, ಸಾಂಸ್ಕೃತಿಕ ಹಾಗೂ ಮನರಂಜನೆ ಇತ್ಯಾಧಿ ಕಾರ್ಯಕ್ರಮಗಳನ್ನು ಹೇಗೆ ಮಾಡಬೇಕು ಎಂಬುದರ ಕುರಿತು ರನ್ನ ಪ್ರತಿಷ್ಠಾನದವರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯೊಂದನ್ನು ಕರೆದು ಚರ್ಚಿಸುವಂತೆ ಸಚಿವರು ತಿಳಿಸಿದರು.
ಮುಧೋಳದಲ್ಲಿ ಮತ್ತೊಮ್ಮೆ ರನ್ನ ವೈಭವ ಆಚರಿಸಬೇಕೆಂಬುದು ನನ್ನ ಕನಸು ಆಗಿತ್ತು ಈ ಹಿಂದೆ ನಾನು ಸಚಿವನಾಗಿದ್ದಾಗ ರನ್ನ ವೈಭವ ಅದ್ದೂರಿಯಾಗಿ ಆಚರಿಸಿರುವದನ್ನು ಸಚಿವ ತಿಮ್ಮಾಪೂರ ಸಭೆಯಲ್ಲಿ ನೆನಪಿಸಿಕೊಂಡ ಅವರು ರನ್ನನ ಹೆಸರಿನಲ್ಲಿ ಪ್ರಶಸ್ತಿ ನೀಡುವದಾಗಿ ತಿಳಿಸಿದರು, ರನ್ನ ವೈಭವ ಇದು ಜಿಲ್ಲೆಗೆ ಮಾತ್ರ ಸಿಮೀತವಾಗದೆ ಇಡಿ ರಾಜ್ಯ ಮಟ್ಟದ ಸಮ್ಮೇಳನ ಆಗಿರುತ್ತದೆ ಎಂದು ಸಚಿವ ತಿಮ್ಮಾಪೂರ ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ರನ್ನ ಪ್ರತಿಷ್ಠಾನದ ನೂತನ ಸದಸ್ಯರುಗಳನ್ನು ಸಚಿವರು ಶಾಲುಹೊದಿಸಿ ಸನ್ಮಾನಿಸಿ, ಗೌರವಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಉದಯಕುಮಾರ ಸಾರವಾಡ, ಸದೂಗೌಡ ಪಾಟೀಲ, ಶಿವಾನಂದ ಕತ್ತಿ, ಸಂಗಪ್ಪ ಇಮ್ಮನ್ನವರ, ಉದಯ ಫಡತಾರೆ, ಡಾ.ಸಂಗಮೇಶ ಕಲ್ಯಾಣಿ, ಪತ್ರಕರ್ತ ವಿಶ್ವನಾಥ ಮುನವಳ್ಳಿ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಉಪ ನಿರ್ದೇಶಕ ಕರ್ಣಕುಮಾರ ಹಾಗೂ ರನ್ನ ಪ್ರತಿಷ್ಠಾನದ ನೂತನ ಸದಸ್ಯರು ಉಪಸ್ಥಿತರಿದ್ದರು.