ಬೆಂಗಳೂರು, ಮೇ17, ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಚುನಾವಣೆಯನ್ನು ಮುಂದೂಡಲು ಸರ್ಕಾರ ಯತ್ನಿಸುತ್ತಿದ್ದು ಆಡಳಿತ ಸಮಿತಿ ರಚನೆ ಮಾಡಲು ಹೊರಟಿದೆ. ಇದಕ್ಕೆ ವಿಪಕ್ಷಗಳು ಟೀಕಿಸುತ್ತಿವೆ. ಈ ಬಗ್ಗೆ ಯುಎನ್‌ಐ ಕನ್ನಡ ಸುದ್ದಿಸಂಸ್ಥೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್ ಸ್ಪಷ್ಟನೆ ನೀಡಿದ್ದು, ಗ್ರಾಪಂ ಆಡಳಿತ ಸಮಿತಿ ರಚನೆ ತಾತ್ಕಾಲಿಕ ಮಾತ್ರ ಎಂದು ಹೇಳಿದ್ದಾರೆ.ಆಡಳಿತ ಸಮಿತಿ ರಚನೆ ಇನ್ನೂ ಅಂತಿಮವಾಗಿಲ್ಲ. ಈ ಬಗ್ಗೆ ಇನ್ನೂ ರೂಪರೇಷೆಗಳು ಸಿದ್ಧವಾಗುತ್ತಿದ್ದು ಆಡಳಿತ ಸಮಿತಿ ರಚನೆ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದ್ದು ಬರುವ ವಾರ ಇದು ಅಂತಿಮವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಕೋವಿಡ್‌ನಿಂದಾಗಿ ಇನ್ನೂ ಆರು ತಿಂಗಳ ಒಳಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಆರು ತಿಂಗಳ ಬಳಿಕ ಚುನಾವಣೆ ಮಾಡಲೇಬೇಕಿದೆ. ಆಡಳಿತ ಸಮಿತಿ ರಚನೆಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಆಡಳಿತ ಸಮಿತಿ ರಚನೆ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಇರುವ ಅರ್ಹತೆಯೇ ಆಡಳಿತ ಸಮಿತಿ ಸದಸ್ಯರಿಗೂ ಅನ್ವಯವಾಗಲಿದೆ. ಇಲ್ಲಿ ಸಾಮಾಜಿಕ ನ್ಯಾಯವನ್ನೂ ಪಾಲಿಸಬೇಕಾಗುತ್ತದೆ. ಆರು ತಿಂಗಳ ಬಳಿಕ ಗ್ರಾ.ಪಂ.ಚುನಾವಣೆ ಮಾಡಲೇಬೇಕಿದೆ ಎಂದರು.
ವಿಪಕ್ಷಗಳ ಟೀಕಿಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದು ಆತಿಕ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಗ್ರಾಮ ಪಂಚಾಯತಿಗಳಿಗೆ ಆಡಳಿತ ಸಮಿತಿ ರಚಿಸಲು ಸರ್ಕಾರದ ಒಲವು ತೋರಿದ್ದು ಚುನಾವಣೆಯಿಲ್ಲದೆ ಕಾರ್ಯಕರ್ತರನ್ನು ಸದಸ್ಯರನ್ನಾಗಿ ಮಾಡಲು ಅವಕಾಶ ಕಲ್ಪಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದರು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳನ್ನು ಆರು ತಿಂಗಳು ಮುಂದೂಡಿರುವ ರಾಜ್ಯ ಸರ್ಕಾರ ಮೇ 15 ರ ನಂತರ ಸದಸ್ಯರ ಅವಧಿ ಪೂರ್ಣಗೊಳ್ಳುವ ಪಂಚಾಯತಿಗಳಿಗೆ ಆಡಳಿತ ಸಮಿತಿ ರಚಿಸಲು ರಾಜ್ಯ ಸರ್ಕಾರ ಮುಂದಾಗಿದ್ದು
ಈ ಕುರಿತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಮುಂದಿನ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಒಪ್ಪಿಗೆ ಪಡೆದು ಆಡಳಿತ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
1993 ರ ಪಂಚಾಯತ್ ರಾಜ್ ಕಾಯ್ದೆಯಲ್ಲಿಯೇ ರಾಜ್ಯ ಸರ್ಕಾರಕ್ಕೆ ಆಡಳಿಯ ಸಮಿತಿ ರಚಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಪಂಚಾಯತಿಗಳಿಗೆ ಆಡಳಿತ ಸಮಿತಿ ರಚಿಸಲು ಅವಕಾಶ ಕಲ್ಪಿಸಲಾಗಿದೆ.
ಪಂಚಾಯತ್ ರಾಜ್ ಕಾಯ್ದೆಯ ಸೆಕ್ಸೆನ್ 8 ರಲ್ಲಿ ರಾಜ್ಯ ಸರ್ಕಾರ ಅವಧಿ ಮುಗಿದ ಪಂಚಾಯತಿಗಳಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ರಚಿಸಬಹುದು ಎಂದು ಉಲ್ಲೇಖಿಸಲಾಗಿದೆ. ಈ ಕಾಯ್ದೆಯ ಪ್ರಕಾರ ಪ್ರತಿಯೊಂದು ಪಂಚಾಯತಿಯಲ್ಲಿ ಇರುವ ಚುನಾಯಿತ ಸದಸ್ಯರ ಸಂಖ್ಯೆಯಷ್ಟೇ ಆಡಳಿತ ಸಮಿತಿ ಸದಸ್ಯರನ್ನು ನೇಮಿಸಲು ಅವಕಾಶ ಒದಗಿಸಲಾಗಿದೆ. ರಾಜ್ಯ ಸರ್ಕಾರ ಪಂಚಾಯತ್ ರಾಜ್ ಕಾನೂನಿನಲ್ಲಿರುವ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ಮುಂದಾಗಿದೆ. ಸರ್ಕಾರ ಈಗಿರುವ ಚುನಾಯಿತ ಸದಸ್ಯರನ್ನೇ ಆಡಳಿತ ಸಮಿತಿ ಸದಸ್ಯರನ್ನಾಗಿ ಮುಂದುವರೆಸಲು ಅವಕಾಶವಿದೆ. ಇಲ್ಲವೇ ಪ್ರತ್ಯೇಕವಾಗಿ ಗ್ರೇಡ್ 1 ದರ್ಜೆಯ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಲು ಅವಕಾಶವಿದೆ.
ಆದರೆ, ಈಗಿರುವ ಸದಸ್ಯರಲ್ಲಿ ಪಕ್ಷ ವ್ಯವಸ್ಥೆ ಇಲ್ಲದಿದ್ದರೂ ಪಂಚಾಯಿತಿ ಮಟ್ಟದಲ್ಲಿಯೂ ರಾಜಕೀಯ ಪಕ್ಷಗಳ ಬೆಂಬಲಿತ ಸದಸ್ಯರಿರುತ್ತಾರೆ. ಹೀಗಾಗಿ ಈಗಿರುವ ಸದಸ್ಯರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು ಇರುವುದರಿಂದ ಅವರ ಅವಧಿ ಮೇ 15 ಮುಕ್ತಾಯವಾಗಲಿದೆ. ಈಗ ಅವರ ಸ್ಥಾನಗಳಿಗೆ ಚುನಾವಣೆ ನಡೆಸದೇ ಸರ್ಕಾರ ಆರು ತಿಂಗಳ ಮಟ್ಟಿಗೆ ಆಡಳಿತ ಸಮಿತಿ ರಚಿಸಲು ಅವಕಾಶ ಇರುವುದರಿಂದ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಕೊಡುವ ಆಲೋಚನೆಯನ್ನು ಸರ್ಕಾರ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಇನ್ನು ಗ್ರಾಮ ಪಂಚಾಯತಿ ಚುನಾವಣೆಗಳನ್ನು ಮುಂದೂಡಿರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಬೇಕೋ ಅಥವಾ ಆಡಳಿತ ಸಮಿತಿ ನೇಮಕ ಮಾಡಬೇಕೋ ಎನ್ನುವ ಕುರಿತು ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಮುಂದಿನ ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.ಆದರೆ ವಿಪಕ್ಷಗಳು ಈಗಿರುವ ಸದಸ್ಯರ ಅಧಿಕಾರವಧಿಯನ್ನೇ ಆರು ತಿಂಗಳು ವಿಸ್ತರಿಸುವಂತೆ ಒತ್ತಾಯ ಮಾಡಿವೆ. ಒಟ್ಟಿನಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ರಾಜಕೀಯ ಯಾವ ಹಂತ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.