ಬೆಂಗಳೂರು,
ಮಾ. 28, ಕೊರೊನಾಗಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ದಾದಿಯರಿಗೆ
ಸರ್ಕಾರ ಯಾವುದೇ ಸಮರ್ಪಕ ಸೌಲಭ್ಯವನ್ನಾಗಲಿ ಸುರಕ್ಷತೆಯಾಗಲೀ ನೀಡಿಲ್ಲ ಎಂದು ಮಾಜಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಖಾಸಗಿ
ವಾಹಿನಿಯೊಂದಿಗೆ ಮಾತನಾಡಿದ ಅವರು, ಕೇವಲ ಲಾಕ್‌ಡೌನ್ ಮಾಡಿ ಕೊರೊನಾ
ನಿಯಂತ್ರಿಸುತ್ತೇವೆ ಎಂಬುದು ಹುಂಬತನ. ಕಳಪೆಮಟ್ಟದ ಗೌನ್ ಮಾಸ್ಕ್‌ಗಳನ್ನು ವೈದ್ಯರಿಗೆ
ನೀಡಲಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಂಭೀರ ಪ್ರಕರಣಗಳನ್ನು
ದಾಖಲಿಸುತ್ತಿಲ್ಲ. ವೈದ್ಯಕೀಯ ಮತ್ತು ಆರೋಗ್ಯ ಸಚಿವರು ಪರಸ್ಪರ ಹೊಂದಿಕೊಂಡು ಕೆಲಸ
ಮಾಡಬೇಕೆಂದು ನಾನು ಸಲಹೆ ನೀಡಿದ್ದೆನೆಯೇ ಹೊರತು ಯಾರನ್ನೂ ಟೀಕಿಸಿಲ್ಲ ಎಂದು
ಸ್ಪಷ್ಟಪಡಿಸಿದರು.
ಹಲವಾರು ಜಿಲ್ಲಾ ಕೇಂದ್ರಗಳಿಗೆ ಮಾಸ್ಕ್ ಗ್ಲೌಸ್ ಗಳಿನ್ನೂ
ಪೂರೈಕೆಯಾಗಿಲ್ಲ. ಯಾವುದೇ ರೀತಿಯ ಸೌಲಭ್ಯವನ್ನಾಗಲೀ ಸುರಕ್ಷಿತ ಕ್ರಮಗಳನ್ನಾಗಲೀ
ಸರ್ಕಾರ ಕೈಗೊಂಡಿಲ್ಲ. ಕೊರೊನಾ ರೋಗಿಗಳನ್ನು ಸಣ್ಣ ಖಾಸಗಿ ಆಸ್ಪತ್ರೆಗಳಲ್ಲಿ
ದಾಖಲಿಸಿಕೊಳ್ಳುತ್ತಿಲ್ಲ. ಸರ್ಕಾರ ಕೊರೊನಾ ಬಗ್ಗೆ ಮುತುವರ್ಜಿ ತೆಗೆದುಕೊಳ್ಳಲು
ಎಡವಾಡುತ್ತಿದೆ ಎಂದು ಟೀಕಿಸಿದರು.ಇದೇ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ
ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, ನಗರದ ಮಾರುಕಟ್ಟೆ ಸ್ಥಳಾಂತರ ಮಾಡಿ ಜನರಲ್ಲಿ ಗೊಂದಲ
ಆತಂಕ ಮೂಡಿಸಿದ್ದಾರೆ ಎಂದು ದೂರಿದರು.ವೆಂಟಿಲೇಟರ್ ಖರೀದಿಸರಿಯಾಗಿಲ್ಲ.
ಕಂಪೆನಿಗಳ ಜೊತೆ ವ್ಯಾಪಾರ ನಡೆಸುತ್ತಿದ್ದು ವ್ಯಾಪಾರ ಕಮಿಷನ್ ದಂಧೆಯಲ್ಲಿ
ಅಧಿಕಾರಿಗಳು ತೊಡಗಿದ್ದಾರೆ. ಕೊರೊನಾವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಬಹಳ
ಹಗುರವಾಗಿ ಪರಿಗಣಿಸಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.ತಿಳುವಳಿಕೆ
ನೀಡಿದ್ದನ್ನು ಸರ್ಕಾರ ಟೀಕೆ ಎಂದುಕೊಳ್ಳಬಾರದು. ಯಾರೇ ಸಲಹೆಯನ್ನು ನೀಡಿದರೂ ಅದನ್ನು ಬಳಸಿಕೊಳ್ಳಬೇಕು. ಪರಿಗಣಿಸಿ ಜನರ ರಕ್ಷಣೆಗೆ ಮುಂದಾಗಬೇಕು ಎಂದರು.