ಲಾಕ್ಡೌನ್ ವೇಳೆ ಅಗತ್ಯ ವಸ್ತುಗಳನ್ನು ಸರ್ಕಾರವೇ ಉಚಿತವಾಗಿ ನೀಡಲಿ: ಟಿ.ಎ.ಶರವಣ

ಬೆಂಗಳೂರು, ಏ.4,ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲವು ಅಗತ್ಯ ವಸ್ತುಗಳನ್ನು ಉಚಿತವಾಗಿ ಸರ್ಕಾರವೇ ವಿತರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಶರವಣ, ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟಲು ಸರ್ಕಾರ ನಿರಂತರವಾಗಿ ಹೋರಾಡುತ್ತಿರುವುದರಿಂದ ರಾಜ್ಯವೇ ಲಾಕ್ಡೌನ್ ಆಗಿ ಸುಮಾರು 10 ದಿನಗಳು ಆಗಿವೆ. ಇಂತಹ ಸಮಯದಲ್ಲಿ ಜನಸಾಮಾನ್ಯರು ಸಹ ಸರ್ಕಾರದ ಜೊತೆ ಕೈಜೋಡಿಸಿ ಈ ಸೋಂಕಿನ ವಿರುದ್ಧ ಹೋರಾಟಕ್ಕಿಳಿದಿರುವುದು ಹೆಮ್ಮೆಯ ಸಂಗತಿ. ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಹಲವಾರು ಸಮಸ್ಯೆಗಳಿಂದ ಜನರು ಕಂಗಾಲಾಗಿರುವುದೂ ಅಷ್ಟೇ ಸತ್ಯ. ಇದನ್ನು ಮನಗಂಡು ಸರ್ಕಾರ ನಿರ್ಗತಿಕರು, ಬಡವರು, ಕೂಲಿಕಾರರು, ಕೊಳಗೇರಿ ವಾಸಿಗಳು ಮತ್ತು ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಕೆಎಂಎಫ್ ವತಿಯಿಂದ ಪ್ರತಿದಿನ 1 ಲೀಟರ್ ಹಾಲು ಮತ್ತು ಉಜ್ವಲ ಯೋಜನೆಯಡಿ ಎಲ್ಪಿಜಿ ಗ್ಯಾಸ್ ಸೌಲಭ್ಯ ಹೊಂದಿರುವ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಪೂರೈಕೆ ಮಾಡಲು ಕ್ರಮಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಈ ಕ್ರಮಗಳು ಸರಿಯಾದ ರೀತಿಯಲ್ಲಿ ಇನ್ನೂ  ದುರ್ಬಲ ವರ್ಗದವರಿಗೆ ತಲುಪಿಲ್ಲ. ಹಾಗಾಗಿ ಲಾಕ್ಡೌನ್ ನಂತಹ ಕಷ್ಟದ ಸಮಯದಲ್ಲಿ ತುರ್ತಾಗಿ ಈ ಸೌಲಭ್ಯಗಳು ವ್ಯವಸ್ಥಿತವಾಗಿ ಸಿಗುವಂತಾಗಬೇಕು. ಅದಕ್ಕಾಗಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಟಿ.ಎ.ಶರವಣ ಪತ್ರದಲ್ಲಿ ಒತ್ತಾಯಿಸಿದ್ದಾರೆ.