ವಿದ್ಯಾರ್ಥಿ ನಿಲಯಗಳಲ್ಲಿ 45,108 ಜನರಿಗೆ ಆಶ್ರಯ: ಗೋವಿಂದ ಎಂ ಕಾರಜೋಳ

ಬೆಂಗಳೂರು, ಜೂ.6,ಕೊರೊನಾ ರೋಗಾಣು ನಿಯಂತ್ರಣಕ್ಕಾಗಿ ಈವರೆಗೆ ಸಮಾಜ ಕಲ್ಯಾಣ ಇಲಾಖೆಯ  ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಒಟ್ಟು 45,108 ಜನರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ  ಎಂದು  ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ. ಪರಿಶಿಷ್ಟ  ಜಾತಿ , ಪರಿಶಿಷ್ಟ ಪಂಗಡ ಹಾಗೂ ವಸತಿ ಶಾಲೆ ಸೇರಿದಂತೆ ಒಟ್ಟು 530 ವಸತಿ ಶಾಲೆಗಳಲ್ಲಿ  ಈವರೆಗೆ 45,108 ಜನರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಪ್ರಸ್ತುತವಾಗಿ 13,170 ಜನರು  ಕ್ವಾರಂಟೈನ್ ನಲ್ಲಿದ್ದಾರೆ. 101  ಪರಿಹಾರ ಕೇಂದ್ರಗಳಲ್ಲಿ 10860  ಕಾರ್ಮಿಕರು, ವಲಸೆ  ಕಾರ್ಮಿಕರು, ನಿರಾಶ್ರಿತರಿಗೆ ಆಶ್ರಯ ನೀಡಲಾಗಿತ್ತು. ಹೊರ ರಾಜ್ಯಗಳ ವಿದ್ಯಾರ್ಥಿಗಳು,  ನಿರಾಶ್ರಿತರಿಗೂ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ನೀಡಲಾಗಿತ್ತು ಎಂದರು.

ಮಿಜೋರಾಂನ 200ಕ್ಕೂ  ಅಧಿಕ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಸೌಲಭ್ಯ ಕಲ್ಪಿಸಲಾಗಿತ್ತು. ಮಿಜೋರಾಂ  ಮುಖ್ಯಮಂತ್ರಿಗಳು ಈ ಕಾರ್ಯಕ್ಕೆ ಶ್ಲಾಘಿಸಿದ್ದರು. ಇವರೆಲ್ಲರೂ ಊಟೋಪಚಾರ ಸೇರಿದಂತೆ   ಅಗತ್ಯ ಸೌಲಭ್ಯಗಳನ್ನು ಒದಗಿಸಿ ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸಲಾಗಿದೆ. ಬೆಂಗಳೂರು   ಮಿಜೋರಾಂ ಅಸೋಷಿಯೇಷನ್ ನ ಅಧ್ಯಕ್ಷ ಲಾಲ್ಡಿಂಗ್ಲಿಯಾನಾ ಮತ್ತು ಇತರ ಪದಾಧಿಕಾರಿಗಳು  ಉಪಮುಖ್ಯಮಂತ್ರಿಯರಿಗೆ ಕೃತಜ್ಞತೆ ಸಲ್ಲಿಸಿ,  ಸಮಾಜ ಕಲ್ಯಾಣ ಇಲಾಖೆಯ ಈ ನೆರವನ್ನು ಸದಾ  ಸ್ಮರಿಸುವುದಾಗಿ  ತಿಳಿಸಿದರು. ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ  ಕಾರ್ಯದರ್ಶಿ ಕುಮಾರ ನಾಯಕ್, ಸಲಹೆಗಾರ ವೆಂಕಟಯ್ಯ ಉಪಸ್ಥಿತರಿದ್ದರು.