ನವದೆಹಲಿ, ಫೆ 2- ಆರ್ಥಿಕತೆ ವೇಗ ಹೆಚ್ಚಿಸಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಪ್ರತಿಪಾದಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ಮೂಲಕ ಸರ್ಕಾರವು ಸೌಲಭ್ಯ ಕಲ್ಪಿಸುವ ಮತ್ತು ಮೂಲಸೌಕರ್ಯ ನಿರ್ಮಿಸುವ ಪಾತ್ರ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
2020-21ನೇ ಸಾಲಿನ ಬಜೆಟ್ ಮಂಡಿಸಿದ ಒಂದು ದಿನದ ನಂತರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಸರ್ಕಾರ, ಖಾಸಗಿ ವಲಯ, ವಿದೇಶಿ ಹೂಡಿಕೆ, ವ್ಯಾಪಾರ ಅಥವಾ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮ ಮಾತ್ರವೇ ಆರ್ಥಿಕತೆ ವೃದ್ಧಿ ಸಾಧ್ಯವಿಲ್ಲ. ಈ ಗುರಿ ಸಾಧಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
‘ಅರ್ಥಿಕತೆ ಪುನಶ್ಚೇತನಕ್ಕೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ ಬಜೆಟ್ ಮೂಲಕ ಸುಲಭಗೊಳಿಸುವ ಮತ್ತು ಮೂಲಸೌಕರ್ಯ ನಿರ್ಮಿಸುವ ಪಾತ್ರವನ್ನು ನಿರ್ವಹಿಸುತ್ತಿದೆ.’ ಎಂದು ಅವರು ಹೇಳಿದರು.
ಯುಎನ್‌ಐ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್, ಹಿರಿಯ ನಾಗರಿಕರ ಹಿತಾಸಕ್ತಿಯನ್ನು ಬಜೆಟ್‌ನಲ್ಲಿ ಪರಿಗಣಿಸಲಾಗಿದೆ ಎಂದು ಹೇಳಿದರು.ಭಾರತದಲ್ಲಿ, 2050ರ ವೇಳೆಗೆ ವೃದ್ಧರ ಸಂಖ್ಯೆ 30 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ.
‘ಹಿರಿಯ ನಾಗರಿಕರ ಕಲ್ಯಾಣಕ್ಕೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ಹಿರಿಯ ನಾಗರಿಕರ ಉಳಿತಾಯಕ್ಕೆ ಹೆಚ್ಚಿನ ಬಡ್ಡಿದರ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಸರ್ಕಾರ ಹಿರಿಯ ನಾಗರಿಕರ ಹಿತ ಕಾಪಾಡಲಿದೆ.’ ಎಂದು ಸಚಿವರು ಹೇಳಿದರು.
ಸರ್ಕಾರ ತನ್ನ ಜವಾಬ್ದಾರಿಯನ್ನು ಮನಗಂಡಿದೆ. ಬಜೆಟ್ ಮೂಲಕ ಆರ್ಥಿಕತೆಯನ್ನು ವೇಗಗೊಳಿಸಲು ಹಾದಿ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.ಬಜೆಟ್ ರೂಪಿಸುವಾಗ ವಲಯವಾರು ವಿಧಾನ ಅನುಸರಿಸಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು,ಸರ್ಕಾರ ಆರ್ಥಿಕತೆಯತ್ತ ಒತ್ತು ನೀಡಿದೆ. ಆರ್ಥಿಕತೆಯನ್ನು ನಾವು ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ಗಮನಹರಿಸಿದೆ ಎಂದು ಹೇಳಿದರು.
ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ಸಂಪತ್ತು ಸೃಷ್ಠಿಗೆ ಒತ್ತು ನೀಡಲಾಗಿದೆ. ಮೂಲಸೌಕರ್ಯ ನಿರ್ಮಾಣವು ಈ ವಲಯದಲ್ಲಿ ಉದ್ಯೋಗ ಮತ್ತು ಇತರ ಚಟುವಟಿಕೆಗಳನ್ನು ಹೆಚ್ಚಿಸುವುದಲ್ಲದೆ, ಅನೇಕ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಸಚಿವರು ಹೇಳಿದರು.