ತೈಲ ಸಮಸ್ಯೆ ಎದುರಿಸಲು ಸರ್ಕಾರ ಬದ್ಧ; ಧರ್ಮೆಂದ್ರ ಪ್ರಧಾನ್

ನವದೆಹಲಿ, ಜ 8 ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ತೈಲದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ತೈಲ ಪೂರೈಕೆಯ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ತೈಲ ಉತ್ಪಾದಕ ರಾಷ್ಟ್ರಗಳೊಂದಿಗೆ ಸರ್ಕಾರವು ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದಲ್ಲಿ ತೈಲ ಪೂರೈಕೆ ಕುರಿತು ತಾವು ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ತಯಾರಿ ನಡೆಸುತ್ತಿದ್ದೇವೆ. ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಕೊಲ್ಲಿ ಪ್ರದೇಶದ ವಿವಿಧ ದೇಶಗಳಲ್ಲಿ ತಮ್ಮ ಸಹವರ್ತಿ ಸಚಿವರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರಧಾನ ಮಂತ್ರಿಗಳ ಕಚೇರಿ ಸೇರಿದಂತೆ ವಿವಿಧ ಹಂತಗಳಲ್ಲಿ ವಿಷಯಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಇರಾನ್ ಕಮಾಂಡರ್ ಮೇಜ್ ಜನರಲ್ ಕಾಸೆಮ್ ಸೊಲೆಮಾನಿ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಅಮೆರಿಕದ ಮಿಲಿಟರಿ ನೆಲೆಗಳ ವಿರುದ್ಧ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು ಕನಿಷ್ಠ 80 ಅಮೆರಿಕಾ ಸೈನಿಕರು ಮೃತರಾಗಿದ್ದಾರೆ ಎಂದು ವರದಿಯಾಗಿದೆ.