ಸರ್ಕಾರದಿಂದ ಕಾರ್ಮಿಕ ವಿರೋಧಿ ನೀತಿ: ಮಧ್ಯಪ್ರವೇಶಿಲು ರಾಜಪಾಲರಿಗೆ ಜೆಸಿಟಿಯು ಮನವಿ

ಬೆಂಗಳೂರು, ಮೇ 17,ರಾಜ್ಯ  ಸರ್ಕಾರ ತನ್ನ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯುವಂತೆ ರಾಜ್ಯಪಾಲರು  ಮಧ್ಯಪ್ರವೇಶಿಸಬೇಕೆಂದು ಜೆಸಿಟಿಯು ರಾಜ್ಯಪಾಲ ವಜೂಬಾಯ್ ವಾಲಾಗೆ ಪತ್ರದ ಮುಖೇನ ಮನವಿ  ಮಾಡಿದೆ.ಕರ್ನಾಟಕ ರಾಜ್ಯ ಸರ್ಕಾರ  ಕೇಂದ್ರ ಸರ್ಕಾರ ಹಾಗೂ ಮಾಲೀಕರ ಲಾಬಿಯ  ಒತ್ತಡಕ್ಕೆ ಮಣಿದು ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ತರಲು  ಮುಂದಾಗಿದೆ . ಕಾರ್ಖಾನೆಗಳ ಕಾಯ್ದೆ ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ  ಹೆಚ್ಚಿಸಲು  ಮತ್ತು ಗುತ್ತಿಗೆ ಕಾರ್ಮಿಕರ ಕಾಯ್ದೆ ಖಾಯಂ ಕೆಲಸಗಳನ್ನು ನಾಶಮಾಡಿ,  ಗುತ್ತಿಗೀಕರಣ ಹೆಚ್ಚಿಸಲು ತಿದ್ದುಪಡಿ ಮಾಡಲು ಉದ್ದೇಶಿಸಿದೆ. ಈಗಾಗಲೇ ಉತ್ತರ ಪ್ರದೇಶ ,  ಮಧ್ಯ ಪ್ರದೇಶ ಮತ್ತು ಗುಜರಾತ್ ರಾಜ್ಯದ ಸರ್ಕಾರಗಳು ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ  ನೆಪದಲ್ಲಿ ಕಾರ್ಮಿಕ ಕಾನೂನುಗಳ ಅನುಷ್ಠಾನಕ್ಕೆ ರಜೆ ಘೋಷಿಸುವಂತಹ ಪ್ರತಿಗಾಮಿ  ಕ್ರಮಕ್ಕೆ ಮುಂದಾಗಿದೆ.

ಇಂತಹ ಪ್ರಗತಿ - ವಿರೋಧಿ ಕ್ರಮ ಸಮಾಜವನ್ನು ಮಧ್ಯ ಯುಗಕ್ಕೆ  ಕೊಂಡೊಯ್ಯಲಿದ್ದು , ಅನೇಕ ಹೋರಾಟಗಳ ಮೂಲಕ ಕಾರ್ಮಿಕ ವರ್ಗ ಗಳಿಸಿದ 8 ಗಂಟೆಗಳ ಕೆಲಸದ  ಅವಧಿಯನ್ನು ಬದಿಗೊತ್ತಲಿದೆ ಎಂದು ಜೆಸಿಟಿಯು ಮುಖಂಡರು ಮನವಿ ಮಾಡಿದ್ದಾರೆಈ  ಹಿನ್ನೆಲೆಯಲ್ಲಿ , ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ  ಸರ್ಕಾರಕ್ಕೆ ಕಾರ್ಮಿಕ ವಿರೋಧಿ ಕ್ರಮಗಳನ್ನು ಕೈಬಿಡುವಂತೆ ಸೂಚಿಸುವಂತೆ ಮನವಿ ಮಾಡಿದೆ.ಲಾಕ್  ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ಪಾವತಿಸದ ಕಾರಣ ದೇಶಾದ್ಯಂತ ದುಡಿಯುವ ವರ್ಗ  ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಇದು ಕೋಟ್ಯಂತರ ವಲಸೆ ಕಾರ್ಮಿಕರು ಉದ್ಯೋಗ  ಕಳೆದುಕೊಂಡು ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಉರಿಬಿಸಿಲಿನಲ್ಲಿ ಊರು ಸೇರುವ  ಪರಿಸ್ಥಿತಿ ನಿರ್ಮಿಸಿದೆ .ದೇಶದ ಕಾರ್ಮಿಕ ವರ್ಗ ಬಹುತೇಕ ಅಸಂಘಟಿತ ವಲಯದಲ್ಲಿ  ದುಡಿಯುತ್ತಿದ್ದು , ಲಾಕ್ ಡೌನ್ ನಿಂದ ಬದುಕನ್ನು ಕಳೆದುಕೊಂಡು ಮನುಕುಲದ ಅತಿ ದೊಡ್ಡ  ಮಾನವೀಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವಾಲಯದಿಂದ ಮಾಲೀಕರಿಗೆ  ಕಾರ್ಮಿಕರ ಸಂಪೂರ್ಣ ವೇತನವನ್ನು ಯಾವುದೇ ಕಡಿತವಿಲ್ಲದೆ ಲಾಕ್ - ಡೌನ್ ಅವಧಿಗೆ  ಪಾವತಿಸಬೇಕೆಂದು ಆದೇಶ ನೀಡಿದ್ದರೂ , ಅಂತಹ ಸೂಚನೆಯನ್ನು ಉಲ್ಲಂಘಿಸಿ ಮಾಲೀಕರು  ಕಾರ್ಮಿಕರ ವೇತನ ಪಾವತಿಯನ್ನು ನಿರಾಕರಿಸುತ್ತಿದ್ದಾರೆ ಆದ್ದರಿಂದ ರಾಜ್ಯ  ಸರ್ಕಾರಕ್ಕೆ ಕಾನೂನು ಉಲ್ಲಂಘಿಸುವ ಮಾಲೀಕರ ವಿರುದ್ಧ ಕ್ರಮ ಜರುಗಿಸಿ ಕಾರ್ಮಿಕರ ವೇತನ  ಪಾವತಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ರಾಜ್ಯಪಾಲರಿಗೆ ಸಂಘಟನೆ ಮನವಿ ಮಾಡಿದೆ.