ಸರ್ಕಾರ ರಚನೆ: ಆರ್ ಎಸ್ ಎಸ್ ನಾಯಕರ ಮೊರೆ ಹೋದ ಬಿಜೆಪಿ

 ಮುಂಬೈ, ನ.6:   ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಗೆ ಅಂತಿಮ ಗಡುವು ಸಮೀಪಿಸುತ್ತಿದ್ದು,  ಶಿವಸೇನೆ ಜತೆಗಿನ ಬಿಕ್ಕಟ್ಟು ಶಮನಕ್ಕೆ ಬಿಜೆಪಿ ಕೊನೆಯದಾಗಿ  ಆರ್ ಎಸ್ ಎಸ್ ನಾಯಕರ ಮೊರೆ ಹೋಗಿದೆ.  ನಾಗಪುರಕ್ಕೆ  ಹಾಲಿ ಮುಖ್ಯಮಂತ್ರಿ ಫಡ್ನವಿಸ್ ಇಂದು ಆಗಮಿಸಿ ಆರ್ ಎಸ್ ಎಸ್  ಮುಖ್ಯಸ್ಥ ಮೋಹನ್ ಭಾಗವತ್  ಭೇಟಿ ಮಾಡಿ ಸರಕಾರ ರಚನೆಗೆ ಮತ್ತೊಂದು, ಕೊನೆಯ  ಕಸರತ್ತು ಮಾಡಲಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆಗೆ 50: 50 ಸೂತ್ರ ಅನುಸರಿಸಬೇಕು ಎಂದು ಮಿತ್ರ ಪಕ್ಷ  ಶಿವಸೇನೆ ಷರತ್ತು ಹಾಕಿದ  ಹಿನ್ನೆಲೆಯಲ್ಲಿ ಸರ್ಕಾರ ರಚನೆ ಬಹಳ ಕಗ್ಗಂಟಾಗಿಯೇ ಉಳಿದಿದೆ. ಅರ್ಧದಷ್ಟು ಸಚಿವ ಸ್ಥಾನ ಹಾಗೂ ಮುಖ್ಯಮಂತ್ರಿ ಹುದ್ದೆಯನ್ನು ಎರಡೂವರೆ ವರ್ಷ ಕಾಲ ಬಿಟ್ಟುಕೊಡಲೇಬೇಕು ಎಂದು ಶಿವಸೇನೆ ಪಟ್ಟು ಹಿಡಿದಿರುವುದು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ .  ಬಿಜೆಪಿ ಮೈತ್ರಿಧರ್ಮ ಪಾಲಿಸುತ್ತಿಲ್ಲ ಎಂದು ಆಪಾದಿಸಿ ಕಳೆದ ವಾರ ಶಿವಸೇನೆ ಮುಖಂಡರು ಮೋಹನ್ ಭಾಗವತ್  ಅವರಿಗೆ ಪತ್ರ ಬರೆದು, ಸಮಸ್ಯೆ ಪರಿಹಾರ ಮಾಡಲು ಮನವಿ ಮಾಡಿದ್ದರು.. ಕಳೆದ ವಿಧಾನಸಭೆಯಲ್ಲಿ 122 ಶಾಸಕರನ್ನು ಹೊಂದಿದ್ದ ಬಿಜೆಪಿ ಸದಸ್ಯಬಲ ಈ ಬಾರಿ 105ಕ್ಕೆ ಕುಸಿದಿದ್ದು, ಅಧಿಕಾರ ಹಂಚಿಕೆಗೆ ಬಿಜೆಪಿ ಮತ್ತು ಫಡ್ನವೀಸ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಬೆಂಬಲ ನೀಡದಿರಲು ಶಿವಸೇನೆ ಬಿಗಿಪಟ್ಟು ಹಿಡಿದಿದೆ . ಶಿವಸೇನೆ ಬಿಜೆಪಿ ಸಂಬಂಧ ಮುರಿದು ಹೊರಬಂದರೆ ಮಾತ್ರ ಹೊಸ, ಪರ್ಯಾಯ ಸರಕಾರ ರಚನೆಗೆ ಅಲೋಚನೆ ಮಾಡಬಹದು ಎಂದು ಎನ್ ಸಿಪಿ ಹೇಳುತ್ತಿದ್ದು ಹೊಸ ಸರಕಾರ ರಚನೆ ದಿನೇ,  ದಿನೇ ತೀವ್ರ ಕೂತುಹಲ ಕೆರಳಿಸುತ್ತಿದೆ.