ಬೆಂಗಳೂರು, ಮೇ 10, ಕೊರೊನಾಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ 1610 ಕೋಟಿ ರೂ.ಪ್ಯಾಕೇಜ್ ಸಹ ನೆರೆ ಪರಿಹಾರದ ಪ್ಯಾಕೇಜ್‌ನಂತೆ ಬರೀ ಘೋಷಣೆಯಂತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.ರಾಜರಾಜೇಶ್ವರಿ ವಿಧಾನ ಸಭಾಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಜಿ.ಕೃಷ್ಣ ಮೂರ್ತಿ ಸುಮಾರು 15 ಸಾವಿರ ಬಡವರಿಗೆ ಉಚಿತ ಆಹಾರ ಸಾಮಗ್ರಿಗಳ ವಿತರಿಸಿದರು. ಆಹಾರ ಸಾಮಗ್ರಿಗಳ ವಿತರಣೆಗೆ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಲವು ವರ್ಗಗಳಿಗೆ ಪರಿಹಾರ ಘೋಷಣೆ ಮಾಡಿದೆಯಾದರೂ ಆ ವರ್ಗದ ಜನರನ್ನು ಗುರುತಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಅಸಂಘಟಿತ ಕಾರ್ಮಿಕ ವರ್ಗದವರಿಗೆ ಹೇಗೆ ಪರಿಹಾರ ತಲುಪಿಸುತ್ತೀರಿ? ಎಂದು ಪ್ರಶ್ನಿಸಿದರು.ಪ್ರಸಕ್ತ ದಾನಿಗಳಿಂದ ಬಡವರು ಕೊರೊನಾ ಸಂಕಷ್ಟದಲ್ಲಿ ಉಳಿದಿದ್ದಾರೆಯೇ ಹೊರತು, ಸರ್ಕಾರದಿಂದಲ್ಲ. ಜನ ಸಂಕಷ್ಟದಲ್ಲಿದ್ದಾರೆ, ಜನರ ನೆರವಿಗೆ ಬಿಜೆಪಿಗರು ನಿಲ್ಲಬೇಕೇ ಹೊರತು ಈ ಸಂದರ್ಭದಲ್ಲೂ ಲೂಟಿ ಹೊಡೆಯುವ ಕೆಲಸ ಮಾಡಬಾರದು.ಕೊರೋನಾ ಲಾಕ್ ಡೌನ್ ವಿಚಾರದಲ್ಲಿ ಸರ್ಕಾರ ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಜನರಿಗೆ ದೋಖಾ ಮಾಡುವ ಕೆಲಸ ನಡೆಯುತ್ತಿದೆ. ಪ್ಯಾಕೆಜ್‌ನಲ್ಲಿ ನಿಜವಾದ ಫಲಾನುಭವಿಗಳಿಗೆ ಇದರ ಲಾಭ ದೊರೆಯುವುದಿಲ್ಲ. ಈ ಯೋಜನೆ ಯಶಸ್ಸು ಕಾಣುವುದಿಲ್ಲ. ಸರ್ಕಾರದ ಈ ಪ್ಯಾಕೇಜ್ ಕೇವಲ ಪ್ರಚಾರದ ಘೋಷಣೆ ಅಷ್ಟೇ. ಯಾವುದೇ ಪೂರ್ವಸಿದ್ಧತೆಯಿಲ್ಲದೇ 1610 ಕೋಟಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದು ಕೂಡ ನೆರೆ ಪರಿಹಾರದ ರೀತಿಯಲ್ಲಿಯೇ ಆಗುತ್ತದೆ. ನೆರೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ಕೊಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಎಷ್ಟು ಜನರಿಗೆ ಪರಿಹಾರ ಕೊಟ್ಟಿದ್ದಾರೆ? ಅದೇ ರೀತಿ ವಿಶೇಷ ಪ್ಯಾಕೇಜ್ ಕೂಡ ಪ್ರಚಾರಕ್ಕೆ ಸೀಮಿತವಾಗಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.