ಕೃಷಿಕರಿಗೆ ಉತ್ತೇಜನ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ: ಡಾ. ವೆಂಕಟೇಶ್‌.ಹೆಚ್‌.ಪಿ

Government's priority is to encourage farmers: Dr. Venkatesh.H.P

ರಾಣಿಬೆನ್ನೂರ 13: ದೇಶದ ಬೆನ್ನೆಲುಬು ಕೃಷಿಯಾಗಿದ್ದು ಕೃಷಿಕರಿಗೆ ಉತ್ತೇಜನ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಜೊತೆಗೆ ರೈತರ ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ದೊರಕಿಸಿಕೊಟ್ಟಲ್ಲಿ ಅವರಿಗೆ ಉತ್ತಮ ಬೆಲೆ ದೊರೆಯುವುದರ ಜೊತೆಗೆ ಸಾಗಾಣಿಕೆಯ ವೆಚ್ಚ ಕಡಿಮೆಯಾಗಿ ರೈತರ ಬದುಕು ಹಸನವಾಗಲಿದೆ ಎಂದು ಸಂಗೋಪನ ಹಾಗೂ ರೇಷ್ಮೆ ಸಚಿವ ಡಾ. ವೆಂಕಟೇಶ್‌.ಹೆಚ್‌.ಪಿ ಹೇಳಿದರು 

ಬುಧವಾರ ತಾಲೂಕಿನ  ಕೂನಬೇವು ಗ್ರಾಮ ಪಂಚಾಯತಿ ವ್ಯಾಪ್ತಿಯ  ರೇಷ್ಮೆ ಮಾರುಕಟ್ಟೆ ಪ್ರಣಾಂಗಣದಲ್ಲಿ 15 ಕೋಟಿ ರೂಪಾಯಿ ಅನುದಾನದಲ್ಲಿ  ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಬಹುತೇಕ ರೈತರಿದ್ದು ಅವರು ತಾವು ಬೆಳೆದ ರೇಷ್ಮೆ ಗೂಡುಗಳನ್ನು ದೂರದ ರೇಷ್ಮೆ ಮಾರುಕಟ್ಟೆಯಾದ ರಾಮನಗರಕ್ಕೆ ಸಾಗಿಸಬೇಕಾಗುತ್ತದೆ ಎಂದರು. 

ಇದರಿಂದ ಅವರ ಸಾಗಾಣಿಕೆ ವೆಚ್ಚ ಹಾಗೂ ಸಮಯ ವ್ಯರ್ಥವಾಗಿ ಕೃಷಿ ಚಟುವಟಿಕೆ ಕುಂಟಿತವಾಗಲು ಕಾರಣವಾಗುವುದು. ಇದನ್ನು ಮನಗಂಡ ರಾಜ್ಯ ಸರ್ಕಾರವು ಸ್ಥಳೀಯ ರೈತರ ಅನುಕೂಲಕ್ಕಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸಲಾಗುತ್ತಿದೆ ಇದರಿಂದ ರೈತರು ರೇಷ್ಮೆ ಬೆಳೆಯುವಲ್ಲಿ ಉತ್ಸುಕರಾಗಿ ಹೆಚ್ಚೆಚ್ಚು ರೇಷ್ಮೆ ಬೆಳೆಯುವಲ್ಲಿ ನಿರತರಾಗುತ್ತಾರೆ,  ಇದರಿಂದ ರೇಷ್ಮೆ ಇಲಾಖೆಗೆ ನತ್ತು ರೈತಿಗೆ ಸಹಕಾರಿಯಾಗಲಿದೆ ಎಂದರು.  

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವು  ಐದು ಗ್ಯಾರಂಟಿಗಳ ಜೊತೆಗೆ  ತಾಲೂಕಿನ ಸಮಗ್ರ ಅಭಿವೃದ್ಧಿಯ ಜೊತೆಗೆ ರೈತರ ಪರವಾಗಿ ಸಾಕಷ್ಟು ಅನುದಾನಗಳನ್ನು ನೀಡುತ್ತಿದ್ದು ರೇಷ್ಮೆ ಮಾರುಕಟ್ಟೆ ಕಟ್ಟಡ ಪ್ರಾರಂಭವಾಗಿರುವುದು ಅವರ ರೈತರ ಪರ ಕಾಳಜಿ ಕೈಗನ್ನಡಿಯಂತಿದೆ. ಮುಂದಿನ ದಿನಗಳಲ್ಲಿ ರೈತರು ತಾವು ಬೆಳೆದ ರೇಷ್ಮೆ ಗೂಡುಗಳನ್ನು ಬರುವ ಡಿಸೆಂಬರ್ 25 ಒಳಗಾಗಿ ಇಲ್ಲಿಯೇ ಮಾರಾಟ ಮಾಡಲು ಮಾರುಕಟ್ಟೆ ಸಿದ್ಧವಾಗುತ್ತಿದೆ ಇದರ ಸದುಪಯೋಗ ಪಡೆದುಕೊಂಡು ರೈತರು ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಹೊಂದಲು  ಮುಂದಾಗಬೇಕು ಎಂದರು.  

ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಸವಣೂರು,  ಗ್ರಾಪಂ  ಮಾಜಿ ಸದಸ್ಯ ಮಾಲತೇಶ ಮಾಸಣಗಿ,  ರೇಷ್ಮೆ ಇಲಾಖೆಯ ತಾಲೂಕ ವಿಸ್ತರಣಾಧಿಕಾರಿ ನರ್ಮದಾ ಎಮ್, ಸಹಾಯಕ ಅಭಿಯಂತರೆ ಹಸನಾಬಿ ಮತ್ತಿತರರು ಇದ್ದರು.