5ಲಕ್ಷ ಅಲ್ಪಸಂಖ್ಯಾತರನ್ನು ಬಿಜೆಪಿ ಸದಸ್ಯರನ್ನಾಗಿಸಲು ಗುರಿ: ಎನ್. ರವಿಕುಮಾರ

ಬೆಂಗಳೂರು 2: ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಮತಬ್ಯಾಂಕ್ ಆಗಿ ಪರಿವತರ್ಿಸಿಕೊಂಡಿರುವ ಕಾಂಗ್ರೆಸ್ಗೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ, ಈ ಬಾರಿ ರಾಜ್ಯದಲ್ಲಿ ಐದು ಲಕ್ಷ ಅಲ್ಪಸಂಖ್ಯಾತರನ್ನು ಬಿಜೆಪಿ ಸದಸ್ಯರನ್ನಾಗಿ ನೇಮಿಸಿಕೊಳ್ಳಲು ಮುಂದಾಗಿದೆ. 

  ಬೆಂಗಳೂರಿನಲ್ಲಿ ನಿನ್ನೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯತ್ವ ಅಭಿಯಾನದ ರಾಜ್ಯ ಸಂಚಾಲಕ ಎನ್. ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಡೀ ದೇಶದಲ್ಲಿ ಬಿಜೆಪಿಯ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದೆ.

   ಇದುವರೆಗೆ ಕೇವಲ 17,764 ಸದಸ್ಯತ್ವ ನೋಂದಣಿ ಮಾತ್ರ ಆಗಿದೆ. ಹಾಗಾಗಿ ಸದಸ್ಯತ್ವ ಅಭಿಯಾನಕ್ಕೆ ವೇಗ ನೀಡಲು ಆಗಸ್ಟ್  3, 4 ಮತ್ತು 11ರಂದು ನಮ್ಮ ಎಲ್ಲ ಶಾಸಕರು ಮತ್ತು ಪದಾಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು. ಆಗಸ್ಟ್ 5ರಂದು ಎಲ್ಲಾ ಮೋರ್ಚಾಗಳ ಪ್ರಮುಖರು ಹಾಗೂ ಪ್ರಕೋಷ್ಟಗಳ ಪ್ರಮುಖರ ಸಭೆ ಕರೆಯಲಾಗಿದೆ. ಎಲ್ಲರಿಗೂ ಗುರಿ ನಿಗದಿ ಪಡಿಸಲಾಗುತ್ತದೆ. ಆಗಸ್ಟ್  8ರಂದು ಸದಸ್ಯತ್ವ ಅಭಿಯಾನದ ಪರಿಶೀಲನಾ ಸಭೆ ನಡೆಯಲಿದ್ದು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  ಸಭೆಯ ನೇತೃತ್ವ ವಹಿಸಲಿದ್ದಾರೆ ಎಂದರು.

  ಸದಸ್ಯತ್ವ ಅಭಿಯಾನಕ್ಕೆ 8,867 ವಿಸ್ತಾರಕರನ್ನು ನೇಮಕಮಾಡಲಾಗಿದೆ. 25ಕ್ಕೂ ಹೆಚ್ಚು ಸದಸ್ಯರನ್ನಾಗಿ ಮಾಡಿದವರನ್ನು ಸಕ್ರಿಯ ಸದಸ್ಯರೆಂದು ಘೋಷಿಸಿ ಜವಾಬ್ದಾರಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಮೈತ್ರಿ ಸರ್ಕಾರದಲ್ಲಿ ಆದಂತೆ ಬಿಜೆಪಿ ಸರ್ಕಾರದಲ್ಲಿ ಆಗಬಾರದು ಎಂಬ ಕಾರಣಕ್ಕೆ ಸಚಿವ ಸಂಪುಟ ರಚನೆ ವಿಳಂಬವಾಗುತ್ತಿದೆ. 

   ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಗಸ್ಟ್ 5ರಂದು ದೆಹಲಿಗೆ ಹೋಗಿ ಬಂದ ನಂತರ ಸಚಿವ ಸಂಪುಟ ರಚನೆಯಾಗುತ್ತದೆ. ರಾಜ್ಯ ಬಿಜೆಪಿ ಪ್ರಮುಖರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಅವರಂತಹ ಪ್ರಮುಖರು ಸಚಿವ ಸಂಪುಟ ರಚನೆಗೆ ಮುಖ್ಯಮಂತ್ರಿಗೆ ನೆರವಾಗುತ್ತಾರೆ. 

   ಕೇಂದ್ರದ ವರಿಷ್ಠರು ಮೇಲುಸ್ತುವಾರಿ ನೋಡಿ ಕೊಳ್ಳುತ್ತಾರೆ. ಆದರೆ ಸಂಪೂರ್ಣ ಪರಮಾಧಿಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.