ಶಿಮ್ಲಾ, ನವೆಂಬರ್ 6: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಾಳೆಯಿಂದ ಎರಡು ದಿನ ಜಾಗತಿಕ ಬಂಡವಾಳ ಹೂಡಿಕೆದಾರರರ ಸಮಾವೇಶ ಜರುಗಲಿದೆ. ರಾಜ್ಯದಲ್ಲಿ ಉತ್ಪಾದನೆ ಮತ್ತು ಉದ್ಯೋಗ ಹೆಚ್ಚಿಸುವುದು ಸೇರಿದಂತೆ ಎಂಟು ಕೇಂದ್ರೀಕೃತ ಕ್ಷೇತ್ರಗಳಲ್ಲಿನ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೃಷಿ-ವ್ಯವಹಾರ ಮತ್ತು ಸುಗ್ಗಿಯ ನಂತರದ ತಂತ್ರಜ್ಞಾನ, ಉತ್ಪಾದನೆ ಮತ್ತು ಔಷಧ , ಪ್ರವಾಸೋದ್ಯಮ ಮತ್ತು ಆತಿಥ್ಯ, ನಾಗರಿಕ ವಿಮಾನಯಾನ, ಜಲ ಮತ್ತು ನವೀಕರಿಸಬಹುದಾದ ಇಂಧನ, ಕ್ಷೇಮ, ಆರೋಗ್ಯ ಮತ್ತು ಆಯುಷ್, ವಸತಿ ಮತ್ತು ನಗರಾಭಿವೃದ್ಧಿ, ಐಟಿ-ಐಟಿಇಎಸ್ ಮತ್ತು ಎಲೆಕ್ಟ್ರಾನಿಕ್ಸ್, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿವಲಯದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಗುವುದು . ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ರೈಸಿಂಗ್ ಹಿಮಾಚಲ ಜಾಗತಿಕ ಹೂಡಿಕೆದಾರರ ಸಭೆಗೆ ಹಾಜರಾಗಿ ಸಚಿವಾಲಯದ ಹೂಡಿಕೆ, ನೀತಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ರಾಜತಾಂತ್ರಿಕರು, ಕಾರ್ಪೋರೇಟ್ ವಲಯದ ದಿಗ್ಗಜರು , ಹಿರಿಯ ನೀತಿ ನಿರೂಪಕರು, ಅಭಿವೃದ್ಧಿ ಸಂಸ್ಥೆಗಳು ಮತ್ತು ವಿಶ್ವದ ಅನೇಕ ಉದ್ಯಮಪತಿಗಳು, ಹೂಡಿಕೆದಾರರು ಭಾಗವಹಿಸಲಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಹೂಡಿಕೆ ಉತ್ತೇಜನ ಮತ್ತು ಸೌಲಭ್ಯ ಸಂಸ್ಥೆ ಇನ್ವೆಸ್ಟ್ ಇಂಡಿಯಾ, ಇಂಡಿಯಾ ಇನ್ವೆಸ್ಟ್ಮೆಂಟ್ ಗ್ರಿಡ್ (ಐಐಜಿ) ಮೂಲಕ 'ರೈಸಿಂಗ್ ಹಿಮಾಚಲ ಶೃಂಗಸಭೆಯನ್ನು ಉತ್ತೇಜಿಸುತ್ತಿದೆ. ಶೃಂಗಸಭೆಯಲ್ಲಿ, ಇನ್ವೆಸ್ಟ್ ಇಂಡಿಯಾ ಸಂದರ್ಶಕರಿಗೆ ಸಂವಾದಾತ್ಮಕ ಡಿಜಿಟಲ್ ಅನುಭವ ನೀಡಲಿದ್ದು, ಐಐಜಿ ಪೋರ್ಟಲ್ ಮೂಲಕ ರಾಜ್ಯದಲ್ಲಿ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲಾಗುತ್ತಿದೆ.