ಡಾ. ಜಿ. ಎಸ್‌. ಭಟ್ಟ ಸಾಗರ ಅವರು ಬರೆದ ಗ್ಲಾನಿ- ನಾಟಕ

ಇದು ರಾಮಾಯಣದ ಕಥೆಯನ್ನಾಧರಿಸಿದ ಪೌರಾಣಿಕ ಆವರಣದ ಕಿರುನಾಟಕ. ಈ ಮೊದಲು ಮಹಾಭಾರತ ಆಧರಿಸಿದ "ಕೊಳ್ಳಿ" ಎಂಬ ನಾಟಕವೊಂದನ್ನು ಇವರು ಬರೆದಿದ್ದಾರೆ.   

“ಗ್ಲಾನಿ” ನಾಟಕ ಶ್ರೀರಾಮ ನಿರ್ಯಾಣದ ಕಥಾವಸ್ತು ಹೊಂದಿದ್ದು, ತ್ರೇತಾ ಯುಗದಲ್ಲಿ ಅವತಾರ ತಾಳಿದ್ದ ರಾಮ 11 ಸಾವಿರ ವರ್ಷ ಕಾಲ ರಾಜ್ಯ ಆಳುತ್ತ, ತನ್ನ ಅವತಾರ ಮುಗಿಸುವ ವಿಚಾರವನ್ನೇ ಮರೆತುಬಿಟ್ಟಿದ್ದ. ಯುಗವೊಂದು ಮುಗಿಯುತ್ತಬಂದಿತ್ತು. ಹೊಸಯುಗ ಕಾಲಿಡಲು ರಾಮನೇ ಅಡ್ಡಿಯಾಗಿದ್ದ. ಅವನು ತನ್ನ ಅವತಾರ ಮುಗಿಸದೇ ಮುಂದಿನ ಅವತಾರವಾಗಲಾರದು. ಎಲ್ಲ ವ್ಯವಹಾರಗಳೂ ತಟಸ್ಥವಾಗಿದ್ದವು.  ದೇವರ್ಷಿ ನಾರದರಿಗೆ ಇದೇ ಚಿಂತೆ ಕಾಡುತ್ತಿತ್ತು. ಹೇಗಾದರೂ ಮಾಡಿ ರಾಮನನ್ನು ಎಚ್ಚರಿಸಬೇಕು. ದೇವೇಂದ್ರನಿಗೆ ತನ್ನ ಸುಖಭೋಗಗಳದೇ ಆಲೋಚನೆ. ಅವನು ನಾರದರಿಗೆ ನೀವೇ ಏನಾದರೂ ಮಾಡಿ ಎಂದುಬಿಟ್ಟ.  ನಾರದರ ಪ್ರಯತ್ನದ ಫಲವಾಗಿ ಕಾಲಪುರುಷನೇ ರಾಮನಲ್ಲಿಗೆ ಹೋಗಿ ಅವನ ಕರ್ತವ್ಯ ಜ್ಞಾಪಿಸುವ ಕೆಲಸ ಮಾಡಬೇಕಾಯಿತು. ದೂರ್ವಾಸ ಮುನಿಯ ನೆಪದಲ್ಲಿ ಲಕ್ಷ್ಮಣನಿಗೆ ರಾಮನೇ ಮರಣದಂಡನೆ ನೀಡುವ ಸನ್ನಿವೇಶ ನಿರ್ಮಾಣವಾಗಿ, ರಾಮ ಸರಯೂ ನದಿಯಲ್ಲಿ ಇಳಿದು ಅವತಾರ ಸಮಾಪ್ತಿ ಮಾಡುತ್ತಾನೆ. ಅಲ್ಲಿಗೆ ಕೃಷ್ಣಾವತಾರದ ದಾರಿ ತೆರೆದುಕೊಳ್ಳುತ್ತದೆ.   

ಈ ಘಟನೆಯನ್ನು ಡಾ. ಭಟ್ ಅವರು ಲಘುವಾದ ನಾಟಕೀಯ ಸನ್ನಿವೇಶಗಳನ್ನು ಸೃಷ್ಟಿಸುವ ಮೂಲಕ ನಾಟಕ ರೂಪಕ್ಕಿಳಿಸಿದ್ದಾರೆ.    

ಹಸಿರು ಎಲೆ ಕಂಗೊಳಿಸಲು ಹಣ್ಣುಎಲೆ ಕಳಚೀಬೀಳಬೇಕಲ್ಲವೆ ಎಂಬುದು ಈ ನಾಟಕದ ಥೀಮ್‌. ಕಾಲಕಾಲಕ್ಕೆ ಸಂಭವಿಸಬೇಕಾದ  ಪರಿವರ್ತನೆ ಆಗುತ್ತಲೇ ಇರಬೇಕಾಗುತ್ತದೆ. ಅದೇ ಯುಗಧರ್ಮ ಅಥವಾ ಕಾಲಧರ್ಮ. ಅದಕ್ಕೆ ಯಾರೂ ಹೊರತಲ್ಲ. ಹೊಸ ಅವತಾರ ಎಂದರೆ ಜಗತ್ತನ್ನು ಹೊಸತರ ಕಡೆಗೆ ಕೊಂಡೊಯ್ಯುವವನೊಬ್ಬ ಹುಟ್ಟಿಬರಬೇಕಾಗುತ್ತದೆ. ರಾಮ ಹೋಗದೆ ಕೃಷ್ಣ ಬರಲು ಆಗುವದಿಲ್ಲ. ಟಿಳಕರು ಹೋಗದೆ ಗಾಂಧಿ ಬರಲು ಆಗುವದಿಲ್ಲ. ಸಮಾಜ / ಲೋಕ ನಿಂತ ನೀರಾದರೆ ಕೊಳಚೆ ಕಾಣಿಸಿಕೊಳ್ಳುವದು ಸಹಜ.   

ಈ 66 ಪುಟಗಳ ನಾಟಕ ಗಣಪ/ ಭಾಗವತ/ರ ತಂಡದೊಂದಿಗೆ ನಾರದನ ಸಂಭಾಷಣೆಯೊಂದಿಗೆ ಆರಂಭವಾಗುತ್ತದೆ. ನಾರದ ತನ್ನ ಉದ್ದೇಶ ಸಾಧನೆಗಾಗಿ ದೇವೇಂದ್ರನನ್ನು ಭೆಟ್ಟಿಯಾದರೂ ಅವನೇನೂ ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸದೆ ನಾರದನಿಗೇ ಆ ಜವಾಬ್ದಾರಿ ವಹಿಸುತ್ತಾನೆ. ಆಗ ಕಾಲಪುರುಷನ ಪ್ರವೇಶ. ಜಡ್ಡುಗಟ್ಟಿಹೋದ ವ್ಯವಸ್ಥೆಯ ನಡುವೆ ಮೈಮರೆತು ಕುಳಿತ ರಾಮನನ್ನು ಎಚ್ಚರಿಸುವ ಕೆಲಸ. ಇಲ್ಲಿ ರಾಮನ ದ್ವಂದ್ವ ವ್ಯಕ್ತಿತ್ವದ ಪರಿಚಯವೂ ಆಗುತ್ತದೆ. ಕಾಲಪುರುಷ ರಾಮ ಮಾಡಿದ ತಪ್ಪುಗಳನ್ನು ಅವನಿಗೇ ತೋರಿಸುತ್ತ ಹೋಗುತ್ತಾನೆ. ರಾಮ ಇಲ್ಲವೆನ್ನುವದಿಲ್ಲ. ಈ ಸನ್ನಿವೇಶದ ಸಂಭಾಷಣೆಗಳು ಸ್ವಾರಸ್ಯಕರವಾಗಿ ಮೂಡಿಬಂದಿವೆ. ಅಲ್ಲಿ ಒಂದು ಕಡೆ ರಾಮ ಹೇಳುತ್ತಾನೆ - "ರಾಮನು ಆಳುತ್ತಿರುವ, ರಾಮಾನುಯಾಯಿಗಳಿಗೆ ಮಾತ್ರ ಮೀಸಲಿಟ್ಟ ರಾಜ್ಯವನ್ನೇ ರಾಮರಾಜ್ಯವೆಂದು ಅರ್ಥೈಸಿಬಿಟ್ಟರು. ವಿಸ್ತೃತವಾದ ನೆಲೆಯಲ್ಲಿ ಜಾತಿ, ಜೀವನಮಾರ್ಗ, ಕುಲ ಪ್ರದೇಶಗಳಿಗೆ ಅತೀತವಾದುದೇ ನಿಜವಾದ ರಾಮರಾಜ್ಯ. ಇರುವ ಎಲ್ಲವನ್ನೂ ಎಲ್ಲರಿಗೂ ತೆರವಾಗಿಸುವದೇ ರಾಮರಾಜ್ಯ. ಹಾಗಾಗಲೇಇಲ್ಲ..."  

ರಾಮಾಯಣ ಮಹಾಭಾರತಗಳು ಯಾವತ್ತೂ ಹೊಸಹೊಸ ಚಿಂತನೆಗಳಿಗೆ ಹಾದಿ ಮಾಡಿಕೊಡುತ್ತಲೇ ಇರುತ್ತವೆ. ಆದ್ದರಿಂದಲೇ ಅವು ಸಹಸ್ರಾರು ವರ್ಷಗಳ ನಂತರವೂ ನಿತ್ಯನೂತನವಾಗಿಯೇ ಉಳಿದುಕೊಂಡಿರುವುದು. ಚಿಂತನಾಶೀಲ ಮನಸ್ಸುಗಳಿಗೆ ಅಲ್ಲಿ ಬೇಕಾದ ಆಹಾರ ಸಿಗುತ್ತಲೇಇರುತ್ತದೆ - ಹುಡುಕುವ ವಿಚಾರ ಇದ್ದರೆ. ಡಾ. ಜಿ. ಎಸ್‌. ಭಟ್ಟರು ಅಂತಹ ಒಂದು ವಿಚಾರವನ್ನೆತ್ತಿಕೊಂಡು ಅದಕ್ಕೆ ನಾಟಕ ರೂಪ ಕೊಟ್ಟಿದ್ದಾರೆ. ರಂಗದ ಮೇಲೆಯೂ ಇದನ್ನು ಯಶಸ್ವಿಯಾಗಿ ಪ್ರಯೋಗಿಸಬಹುದು. ಕೆಲವರಿಗೆ ಇಲ್ಲಿಯ ಲಘು ಸ್ವರೂಪ ಇಷ್ಟವಾಗದೆಯೂಹೋಗಬಹುದು. ಅದು ಅವರವರು ಆಲೋಚಿಸುವ ಬಗೆಯಲ್ಲಿದೆ. ಓದುವದರಿಂದ ಯಾರಿಗೂ ಯಾವ ಗ್ಲಾನಿಯೂ ಆಗಲಾರದು.   

- * * * -