ಚಂಡೀಗಢ, ನ 4: ತಮಿಳುನಾಡಿನಲ್ಲಿ ಎರಡು ವರ್ಷದ ಬಾಲಕ ಸುಜಿತ್ ವಿಲ್ಸನ್ ಸಾವಿನ ಕಹಿ ಘಟನೆ ಮಾಸುವ ಮುನ್ನವೇ ಹರಿಯಾಣದ ಕರ್ನಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಷರ್ಿಂಗಾಪುರ್ ಗ್ರಾಮದಲ್ಲಿ ಐದು ವರ್ಷದ ಬಾಲಕಿಯೊಬ್ಬಳು ಕೊಳವೆ ಬಾವಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಕೊಳವೆ ಬಾವಿಗೆ ಬಿದ್ದ ಮಗುವನ್ನು ಶಿವಾನಿ ಎಂದು ಗುರುತಿಸಲಾಗಿದ್ದು ಆಕೆಯ ರಕ್ಷಣೆಗೆ ಎನ್ ಡಿ ಆರ್ ಎಫ್ ತಂಡ ಹರಸಾಹಸ ಮಾಡಿದರೂ ಪ್ರಯೋಜನವಾಗದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಬಾಲಕಿಯನ್ನು ಬದುಕಿಸಲು ರಕ್ಷಣಾ ಸಿಬ್ಬಂದಿ ಬೋರ್ ವೆಲ್ ಒಳಕ್ಕೆ ಆಮ್ಲಜನಕ ಪೂರೈಸಿದರೂ ಪ್ರಯೋಜನವಾಗಲಿಲ್ಲ. ಜೊತೆಗೆ ಪಾಲಕರ ಧ್ವನಿಯನ್ನು ರೆಕಾರ್ಡ್ ಮಾಡಿ ಆ ಧ್ವನಿಮುದ್ರಿಕೆ ಆಕೆಗೆ ಕೇಳಿಸುವಂತೆ ಮಾಡಿ ಧೈರ್ಯ ತುಂಬುವ ಪ್ರಯತ್ನ ಮಾಡಲಾಗಿತ್ತು. ಭಾನುವಾರ ಮನೆಯ ಹೊರಗೆ ಆಟವಾಡುತ್ತಿದ್ದಾಗ ಅವರೇ ಕೊರೆಸಿದ್ದ ಕೊಳವೆ ಬಾವಿಗೆ ಶಿವಾನಿ ಆಕಸ್ಮಿಕವಾಗಿ ಬಿದ್ದಿದ್ದು ಬಹಳ ಹೊತ್ತಾದರೂ ಆಕೆ ಕಾಣದಿದ್ದಾಗ ಪಾಲಕರು ಆತಂಕಗೊಂಡು ಹುಡುಕಾಟ ನಡೆಸಿದ್ದರು. ಅನಂತರ ಆಕೆ ಕೊಳವೆಬಾವಿಗೆ ಬಿದ್ದಿರುವುದು ಖಚಿತವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಎನ್ ಡಿ ಆರ್ ಎಫ್ ತಂಡ 50 ಅಡಿ ಕೊಳವೆ ಬಾವಿಗೆ ಬಿದ್ದಿದ್ದ ಶಿವಾನಿಯನ್ನು ಬದುಕಿಸಲು ಹರಸಾಹಸ ಮಾಡಿದರೂ ಪ್ರಯೋಜನವಾಗದೇ ಆಕೆ ಮೃತಪಟ್ಟಿರುವುದಾಗಿ ಇತ್ತೀಚಿನ ವರದಿ ತಿಳಿಸಿದೆ.