ಗೌರಿ ಗಣೇಶ, ಈದ್ ಮಿಲಾದ್ ಹಬ್ಬ: ಪೊಲೀಸ್ ಪಥ ಸಂಚಲನ

ಗೌರಿ ಗಣೇಶ, ಈದ್ ಮಿಲಾದ್ ಹಬ್ಬ: ಪೊಲೀಸ್ ಪಥ ಸಂಚಲನ Gauri Ganesha, Eid Milad Festival: Police March

ದೇವರಹಿಪ್ಪರಗಿ 24: ಮುಂಬರುವ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸುವ ನಿಟ್ಟಿನಲ್ಲಿ ಹಾಗೂ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವಿಜಯಪುರ ಜಿಲ್ಲಾ ಗ್ರಾಮೀಣ ಪೋಲಿಸ್ ಠಾಣೆಯ ಡಿವೈಎಸ್ಪಿ ಪಿ.ಎಸ್‌.ಸುಲ್ಪಿ ಹೇಳಿದರು. 

ಪಟ್ಟಣದಲ್ಲಿ ರವಿವಾರದಂದು ಹಬ್ಬಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಪಥ ಸಂಚಲನ ನೇತೃತ್ವ ವಹಿಸಿ ಮಾತನಾಡಿದ ಅವರು, ಗೌರಿ ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಯಾವುದೇ ರೀತಿಯ ಅನಾಹುತಗಳು ಆಗದಂತೆ ಶಾಂತಿಯುತವಾಗಿ ಆಚರಿಸಬೇಕು. ಸಾರ್ವಜನಿಕರ ಸುರಕ್ಷತೆಗೆ ಪೊಲೀಸ್ ಇಲಾಖೆ ಇದೆ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಥಸಂಚಲನ ನಡೆಸಲಾಯಿತು ಎಂದರು. 

ನಂತರ ಪಟ್ಟಣದ ಪೊಲೀಸ್ ಠಾಣೆಯಿಂದ ಬಸ್ ನಿಲ್ದಾಣದ ಎದುರುಗಡೆ, ಮೇನ್ ಬಜಾರ್ ರಸ್ತೆ, ಕರಿದೇವರ ದೇವಸ್ಥಾನ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆದಿದ್ದು, ಜನರಲ್ಲಿ ಸುರಕ್ಷತೆ, ವಿಶ್ವಾಸ ಮೂಡಿಸುವ ಉದ್ದೇಶದ ಜೊತೆಗೆ ಶಾಂತಿಯ ಸಂದೇಶ ಸಾರಿದರು. 

ಗ್ರಾಮೀಣ ಪೋಲಿಸ್ ಠಾಣೆಯ ಸಿಪಿಐ ರಮೇಶ ಅವಜಿ,ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ಸಚಿನ್ ಆಲಮೇಲಕರ್, ತಿಕೋಟಾ ಪಿಎಸ್‌ಐ ದೇವರಾಜ ಉಳ್ಳಾಗಡ್ಡಿ, ಮನಗೂಳಿ ಪಿಎಸ್‌ಐ ಶ್ರೀಕಾಂತ ಕಾಂಬಳೆ, ಬಬಲೇಶ್ವರ ಪಿಎಸ್‌ಐ ಬಸವರಾಜ ಮೇಳಪ್ಫನವರ ಸೇರಿದಂತೆ ವಿವಿಧ ಪೋಲಿಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.