ನವದೆಹಲಿ, ಮೇ 26,ಇಂದಿಗೆ ಸರಿಯಾಗಿ 21 ವರ್ಷಗಳ ಹಿಂದೆ ಅಂದರೆ 1999ರ ವಿಶ್ವಕಪ್ ವೇಳೆ ಭಾರತ ಕ್ರಿಕೆಟ್ ತಂಡದ ಇಬ್ಬರು ಆಟಗಾರರು ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದರು.ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಎರಡನೇ ವಿಕೆಟ್‌ಗೆ ಹಿಂದೆಂದೂ ದಾಖಲಾಗದ ಮೊತ್ತವನ್ನು ಕಲೆಹಾಕಿದ್ದರು.ಶ್ರೀಲಂಕಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಆರಂಭಿಕ ಆಘಾತ ಅನುಭವಿಸಿತು. ಭಾರತ ಕೇವಲ 6 ರನ್ ಗಳಿಸಿದ್ದ ಸಂದರ್ಭದಲ್ಲಿ ಆರಂಭಿಕಿ ಆಟಗಾರ ಸದಗೋಪನ್ ರಮೇಶ್ ಮೊದಲ ಓವರ್ ನಲ್ಲಿಯೇ ವೇಗಿ ಚಾಮಿಂಡ ವಾಸ್ ಎಸೆತಕ್ಕೆ ಬೌಲ್ಡ್ ಆಗಿದ್ದರು. ಆದರೆ ಅದಾದ ಬಳಿಕ ಲಂಕಾದ ಬೌಲರ್‌ಗಳಿಗೆ ಎದುರಾಗಿದ್ದು ಅಕ್ಷರಶಃ ಮರ್ಮಾಘಾತ. ದ್ವಿತೀಯ ವಿಕೆಟ್ ಗೆ ಕೂಡಿಕೊಂಡ ಆ ರಂಭಿಕ ಆಟಗಾರ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಲಂಕಾ ಬೌಲರ್‌ಗಳ ದಾಳಿಯನ್ನು ಪುಡಿಗಟ್ಟಿದರು. ಸತತ 46ನೇ ಓವರ್ ತನಕ ಬ್ಯಾಟ್ ಬೀಸಿದ ಈ ಜೋಡಿ 318 ರನ್‌ಗಳ ಜೊತೆಯಾಟವನ್ನು ನೀಡಿದ್ದರು. ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ ಸೌರವ್ ಗಂಗೂಲಿ ತನ್ನ ಕ್ರಿಕೆಟ್ ಕೆರಿಯರ್‌ನ ಸರ್ವಾಧಿಕ 183 ರನ್ ಗಳಿಸಿದರು. ಗಂಗೂಲಿಯ ಈ ಅದ್ಬುತ ಇನಿಂಗ್ಸ್ ನಲ್ಲಿ 17 ಬೌಂಡರಿ ಮತ್ತು 7 ಸಿಕ್ಸರ್ ಇದ್ದವು. ಕನ್ನಡಿಗ ರಾಹುಲ್ ದ್ರಾವಿಡ್ 145 ರನ್ ಗಳಿಸಿ ರನ್‌ಔಟ್ ಆಗುವ ಮುನ್ನ 17 ಬೌಂಡರಿ ಮತ್ತು ಒಂದು ಸಿಕ್ಸರ್ ದಾಖಲಿಸಿದ್ದರು.