ತಿರುವನಂತಪುರಂ, ಫೆ ೭, ಕೇರಳ ರಾಜ್ಯ ಸರ್ಕಾರದ ಬಜೆಟ್ ಭಾಷಣದ ಪ್ರತಿಯ ಮೇಲೆ ಎಲ್ ಡಿಎಫ್ ಸರ್ಕಾರ ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಿಸಿದ ಚಿತ್ರವನ್ನು ಮುದ್ರಿಸಿರುವುದು ತೀವ್ರ ಚರ್ಚೆಯ ಅಂಶವಾಗಿದೆ.ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಯಾರು ಹತ್ಯೆ ನಡೆಸಿದ್ದರು ಎಂಬ ಅಂಶವನ್ನು ಜನರಿಗೆ ಮತ್ತೊಮ್ಮೆ ಜ್ಞಾಪಿಸಲು ಈ ಚಿತ್ರವನ್ನು ಮುದ್ರಿಸಲಾಗಿದೆ ಎಂದು ರಾಜ್ಯ ಸರ್ಕಾರ ಚಿತ್ರವನ್ನು ಸಮರ್ಥಿಸಿಕೊಂಡಿದೆ. ಗಾಂಧಿಯನ್ನು ಹೀಗೆ ರಾಜಕೀಯ ಕಾರಣಗಳಿಗೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ರಾಜ್ಯ ಸರ್ಕಾರ, ಶುಕ್ರವಾರ ಮುಂಗಡ ಪತ್ರ ಮಂಡಿಸಿದೆ. ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್ ಸತತ ಐದನೇ ಬಾರಿಗೆ ಮುಂಗಡ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ, ಬಜೆಟ್ ಪ್ರತಿಯ ಮೇಲೆ ಮಹಾತ್ಮಾಗಾಂಧಿ ಗುಂಡಿನ ದಾಳಿಯಿಂದ ರಕ್ತ ಸಿಕ್ತವಾಗಿ ಕುಸಿದು ಬಿದ್ದಿರುವ ಚಿತ್ರವನ್ನು ಮುದ್ರಿಸಲಾಗಿದೆ. ಮಲಯಾಳಿ ಚಿತ್ರಕಾರ ರಚಿಸಿರುವ ಈ ಚಿತ್ರವನ್ನು ಮುದ್ರಿಸಲಾಗಿದೆ ಎಂದು ಥಾಮಸ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಾಂಧಿ ಹತ್ಯೆಯನ್ನು ಜನರಿಗೆ ಮತ್ತೊಮ್ಮೆ ಜ್ಞಾಪಿಸಲು ಬಯಸಿದ್ದೇವೆ. ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷಕ್ಕೆ ಸೇರಿದ ಓ ಧರ್ಮಾಂದನ ಕೈಯಲ್ಲಿ ಅವರು ಹತ್ಯೆಗೀಡಾಗಿದ್ದರು. ಇದನ್ನು ಜನರು ಎಂದಿಗೂ ಮರೆಯ ಬಾರದು ಎಂಬ ಉದ್ದೇಶದಿಂದ ಚಿತ್ರ ಮುದ್ರಿಸಲಾಗಿದೆ ಎಂದು ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪಕ್ಷಾತೀತವಾಗಿ ಹೋರಾಡಬೇಕೆಂದು ಅವರು ಕರೆ ನೀಡಿದರು.
ಆದರೆ, ಸರ್ಕಾರದ ಕ್ರಮವನ್ನು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಲ (ಕಾಂಗ್ರೆಸ್) ಖಂಡಿಸಿದರು. ತಾವು ಆರ್‌ಎಸ್‌ಎಸ್-ಬಿಜೆಪಿ ನೀತಿಗಳ ವಿರುದ್ದ ಹೋರಾಡಲಿದ್ದೇವೆ, ಎಂದ ಮಾತ್ರಕ್ಕೆ ಬಜೆಟ್ ಪ್ರತಿಗಳ ಮೇಲೆ ಈ ರೀತಿಯ ಚಿತ್ರವನ್ನು ಮುದ್ರಿಸುವುದು ಸೂಕ್ತವಲ್ಲ ಎಂದರು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ, ವಿರೋಧ ಪಕ್ಷದ ಉಪ ನಾಯಕ ಎಂ.ಕೆ.ಮುನೀರ್, ಕೂಡ ಸರ್ಕಾರ ನಿರ್ಧಾರವನ್ನು ವಿರೋಧಿಸಿದರು. ಮಹಾತ್ಮ ಗಾಂಧಿ ಅವರನ್ನು ರಾಜಕೀಯ ಉದ್ದೇಶಗಳಿಗೆ ಬಳಸುವುದು ಸೂಕ್ತವಲ್ಲ. ಗಾಂಧಿ ಎಲ್ಲರ ಮನಸ್ಸಿನಲ್ಲಿಯೂ ಇದ್ದಾರೆ ಎಂದು ಹೇಳಿದರು. ಈ ರೀತಿ ಬಜೆಟ್ ಪ್ರತಿಗಳ ಮೇಲೆ ಬಳಸುವುದು ಎಂದರೆ ಮತಗಳಿಗಾಗಿ ಗಾಂಧಿಯನ್ನು ಬಳಸಿದಂತಾಗಲಿದೆ ಎಂದರು. ಇದು ಸರ್ಕಾರದ ನೀತಿಯೇ ಆಗಿದ್ದರೆ, ಅದನ್ನು ರಾಜ್ಯಪಾಲರ ಭಾಷಣದ ಮೇಲೆ ಮುದ್ರಿಸಬೇಕಿತ್ತೇ ಹೊರತು , ಬಜೆಟ್ ಭಾಷಣದಲ್ಲಿ ಅಲ್ಲ ”ಎಂದು ಮುನೀರ್ ಹೇಳಿದರು.