ಉಗ್ರಗಾಮಿಗಳ ದಾಳಿಗೆ ಹುತಾತ್ಮರಾದವರಿಗೆ ಗಾಂಧಿ ವೃತ್ತದಲ್ಲಿ ಮೌನಚಾರಣೆ
ವಿಜಯಪುರ 25 : ಕಾಶ್ಮೀರ ಪ್ರವಾಸ ವೇಳೆ ದುಷ್ಟ ಉಗ್ರಗಾಮಿಗಳ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡು ಹುತಾತ್ಮರಾದ ಜೀವಗಳಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೇತೃತ್ವದಲ್ಲಿ ನೂರಾರು ಮುಖಂಡರು ಗಾಂಧಿ ವೃತ್ತದಲ್ಲಿ ಜಮಾಯಿಸಿ ಮೇಣದ ಬತ್ತಿ ಬೆಳಗಿದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಮಾತನಾಡಿ, ಉಗ್ರಗಾಮಿಗಳು ನಡೆಸಿದ ದಾಳಿ ಇಡೀ ಮನುಕುಲದ ಮೇಲೆ ಆಗಿದೆ, ಅವರು ನಡೆಸಿದ ದಾಳಿಯಿಂದ ಪ್ರತಿ ಭಾರತೀಯನಿಗೂ ಗಾಯವಾಗಿದೆ, ಇಂತಹ ದುಷ್ಟ ಉಗ್ರಗಾಮಿಗಳು ಎಲ್ಲೇ ಅಡಗಿರಲಿ ಅವರನ್ನು ಕೊಚ್ಚಿ ಹಾಕಬೇಕು, ದುಷ್ಟ ಉಗ್ರಗಾಮಿಗಳಿಗೆ ಹೃದಯವೇ ಇಲ್ಲ ಅವರು ಮಾನವರೇ ಅಲ್ಲ ಎಂದರು. ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಉಗ್ರಗಾಮಿಗಳು ಬಿಲದಲ್ಲಿ ಅಡಗಿದರೂ ಮೋದಿ ಅವರು ಬಿಡಬಾರದು, ಉಗ್ರಗಾಮಿಗಳು ರಾಕ್ಷಸರು, ಅವರನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು, ಈ ವಿಷಯದಲ್ಲಿ ನಾವು ಪ್ರಧಾನಿ ಅವರೊಂದಿಗೆ ಇದ್ದೇವೆ ಎಂದರು. ಅಲ್ಪಸಂಖ್ಯಾತ ಮುಖಂಡ ಮೊಹ್ಮದ್ ರಫೀಕ್ ಟಪಾಲ್ ಮಾತನಾಡಿ, ಈ ರೀತಿ ಪೈಶಾಚಿಕ ಕೃತ್ಯ ನಡೆಸಿರುವ ಉಗ್ರಗಾಮಿಗಳು ಮನುಷ್ಯರೇ ಅಲ್ಲ, ಭಯೋತ್ಪಾದಕರನ್ನು ಮಟ್ಟ ಹಾಕುವ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕು ಎಂದರು. ಪ್ರಮುಖರಾದ ಎಸ್.ಎಂ. ಪಾಟೀಲ ಗಣಿಹಾರ, ಡಾ.ರವಿಕುಮಾರ ಬಿರಾದಾರ, ಸೈಯ್ಯದ್ ಆಸೀಫುಲ್ಲಾ ಖಾದ್ರಿ, ಮೈನುದ್ದೀನ್ ಬೀಳಗಿ, ಮಹಾದೇವಿ ಗೋಕಾಕ್, ವಿಜಯಕುಮಾರ ಘಾಟಗೆ, ಮಹಾದೇವ ರಾವಜಿ ಪಾಲ್ಗೊಂಡಿದ್ದರು.