ಬೆಂಗಳೂರು, ಜೂ.6,ಯುಜಿಸಿ ಪ್ರಕಟಿಸಿದ ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವಾದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಭರ್ಜರಿ ಪ್ರಗತಿ ಸಾಧಿಸಿದೆ. ಹಿಂದಿನ ಪಟ್ಟಿಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳ ಕೆಳಗೆ ಇದ್ದ ಜಿಕೆವಿಕೆ ಈಗ ರಾಷ್ಟ್ರಮಟ್ಟದಲ್ಲಿ 84ನೇ ಶ್ರೇಯಾಂಕ ಪಡೆದಿದೆ. ಕೃಷಿ ವಿಶ್ವವಿದ್ಯಾಲಯಗಳ ಪೈಕಿ 9ನೇ ಸ್ಥಾನಕ್ಕೆ ಏರಿದೆ.
ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗದ (ಯು.ಜಿ.ಸಿ.) ಮಾಹಿತಿ (2020) ಅನ್ವಯ ಪ್ರಸ್ತುತ 409 ರಾಜ್ಯ ಮತ್ತು 50 ಕೇಂದ್ರ ಸರ್ಕಾರದ, 127 ಡೀಮ್ಡ್ (ಸರ್ಕಾರಿ ಮತ್ತು ಖಾಸಗಿ) ಹಾಗೂ 349 ಖಾಸಗಿ ವಿಶ್ವವಿದ್ಯಾನಿಲಯಗಳು ದೇಶದಲ್ಲಿ ಉನ್ನತ ಶಿಕ್ಷಣ ಒದಗಿಸುತ್ತಿವೆ. ಶಿಕ್ಷಣ ವಿಶ್ವದ ಭಾರತೀಯ ಸರ್ಕಾರದ ವಿಶ್ವವಿದ್ಯಾನಿಲಯಗಳ ಶ್ರೇಯಾಂಕ 2020-21 ನಡೆಸಲು ದೆಹಲಿಯ ಮಾರುಕಟ್ಟೆ ಸಂಶೋಧನೆ ಮತ್ತು ಅಭಿಪ್ರಾಯ ಸಂಗ್ರಹಣಾ ಕಂಪೆನಿ ಸೆಂಟರ್ ಫಾರ್ ಫೋರ್‍ಕ್ಯಾಸ್ಟಿಂಗ್ ಮತ್ತು ರೀಸರ್ಚ್ ಪ್ರೈ.ಲಿ. (ಸಿ ಫೋರ್)ನ ಪ್ರತಿಷ್ಠಿತ 150 ಕ್ಷೇತ್ರ ಸಿಬ್ಬಂದಿ 25 ನಗರಗಳಲ್ಲಿನ 162 ವಿಶ್ವವಿದ್ಯಾಲಯಗಳ 2,214 ಬೋಧಕರು ಮತ್ತು 1126 ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ 828 ಔದ್ಯಮಿಕ ಪ್ರತಿನಿಧಿಗಳನ್ನೊಳಗೊಂಡ 4,168 ಮಾದರಿಯನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ವಿವಿ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ಮಾತನಾಡಿ, ಉನ್ನತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ರಾಷ್ಟ್ರದ ಸಂಸ್ಥೆಗಳಲ್ಲಿ 84ನೇ ಸ್ಥಾನ ಮತ್ತು ರಾಜ್ಯ ಕೃ.ವಿ.ವಿ.ಗಳಲ್ಲಿ 9ನೇ ಸ್ಥಾನ ಗಳಿಸಿರುವುದರಿಂದ ಸಂತಸ ತಂದಿದೆ ಎಂದರು.
ಕರ್ನಾಟಕದ ಹಳೆಯ ಹಾಗೂ ಹಿರಿಯ ವಿಶ್ವವಿದ್ಯಾಲಯವಾಗಿದ್ದು ಆರು ಸ್ನಾತಕ ಪದವಿ, 22 ವಿಷಯಗಳಲ್ಲಿ ಸ್ನಾತಕೋತ್ತರ ಹಾಗೂ 15 ವಿಷಯಗಳಲ್ಲಿ ಡಾಕ್ಟೊರಲ್ ಪದವಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕೃಷಿ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಸ್ವಯಂ ಯಾಂತ್ರೀಕರಣ, ನಗದುರಹಿತ ಮತ್ತು ಕಾಗದರಹಿತ ಸೆಮಿಸ್ಟರ್ ನೋಂದಣಿ, ಇ-ಕಲಿಕೆ, ಡಿಜಿಟಲ್ ಮೌಲ್ಯಮಾಪನ ಮುಂತಾದ ಮಾಹಿತಿ, ಸಂವಹನೆ ಮತ್ತು ತಂತ್ರಜ್ಞಾನ ಪರಿಕರಗಳನ್ನು ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಪರೀಕ್ಷೆಗಳ ಮೌಲ್ಯಮಾಪನಕ್ಕಾಗಿ ಡಿಜಿಟಲ್ ಮಾರ್ಕಿಂಗ್ ಬಳಸುವ ಏಕೈಕ ವಿಶ್ವವಿದ್ಯಾನಿಲಯವಾಗಿದೆ.