ಜಿಐ ಕಿರೀಟ - ಸಮುದಾಯ, ಪ್ರಕೃತಿಯ ಆಸ್ತಿ ಕೆ.ಎಸ್. ರಾಜಮನ್ನಾರ್

  ಬೆಂಗಳೂರು, ಆ 25     ರಾಜ್ಯದ  ತೋಟಗಾರಿಕೆ, ಕೈಗಾರಿಕೆ ಉತ್ಪನ್ನಗಳು ಜಿಐ ಕಿರೀಟ ತೊಡಿಸಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಮೇಲಿಂದ ಮೇಲೆ  ಸುದ್ದಿಯಾಗುತ್ತಿದೆ. ಇದರಿಂದ ಏನು ಪ್ರಯೋಜನ ? ರೈತರಿಗೆ ಮತ್ತು ಗ್ರಾಹಕರಿಗೆ ಆಗುವ ಲಾಭಗಳೇನು? ನಷ್ಟವೇನು? ಎಂಬ ಚರ್ಚೆ ನಡೆಯುತ್ತಿದೆ.  ಹಾಗೆ ನೋಡಿದರೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದ ಹೆಚ್ಚಿನ ತೋಟಗಾರಿಕೆ  ಮತ್ತು  ಕೈಗಾರಿಕೆ ಉತ್ಪನ್ನಗಳು ಕಿರೀಟ ತೊಡಿಸಿಕೊಂಡಿವೆ ಎಂಬುದು  ನಿಜಕ್ಕೂ ಅಭಿಮಾನದ ಸಂಗತಿ.ಜಿಐ ಕಿರೀಟ, ಸ್ಥಾನಮಾನ ಸಿಕ್ಕಿದೆ ಎಂದರೆ ಅದರ ಅರ್ಥ  ಅದು ಸಮುದಾಯ ಆಸ್ತಿ ಮತ್ತು ಪ್ರಕೃತಿಯ ಆಸ್ತಿ.  ಈಗ ತೊಗರಿ ಕಣಜ ಎಂದೇ ಪ್ರಸಿದ್ದವಾದ ಕಲಬುರಗಿಯ ತೊಗರಿ ಬೇಳೆಗೂ ಜಿಐ ಸ್ಥಾನಮಾನ ದೊರಕಿದೆ.  ಒಂದರೆಡು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆಯುವ ಅಡಿಕೆಗೆ ಜಿ ಐ ಕಿರೀಟ ಸಿಕ್ಕಿತ್ತು . ಈಗ ಕೃಷಿ ಬೆಲೆ ಆಯೋಗ, ಕೃಷಿ ವಿಶ್ವವಿದ್ಯಾನಿಲಯ, ಕೃಷಿ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಘಟನೆಗಳ ಜಂಟಿ ಪ್ರಯತ್ನದಿಂದ ರಾಜಮುಡಿ ಎಂಬ ಪುರಾತನ ಸಮುದಾಯ ಆಧಾರಿತ, ಹಳೇ ಮೈಸೂರು ಭಾಗದಲ್ಲಿ ಬೆಳೆಯುವ ಭತ್ತದ ತಳಿ ಜಿಐ ಕಿರೀಟ ತೊಡಿಸಿಕೊಳ್ಳುವ ಹಾದಿಯಲ್ಲಿ ದಾಪುಗಾಲು ಹಾಕಿದೆ. ಜಿಐ ಎಂದರೆ ಭೌಗೋಳಿಕ ಸನ್ನದು (ಪ್ರಾದೇಶಿಕ ಅಸ್ತಿತ್ವದ ಗುಣಲಕ್ಷ ಹೀರಿಕೊಂಡಿರುವ ಬೆಳೆ, ತಳಿ - ಜಿಯಾಗ್ರಫಿಕಲ್ ಇಂಡಿಕೇಷನ್) ಹಾಗಾದರೆ ಜಿಐ ಕಿರೀಟವನ್ನು ಏಕೆ ತೊಡಿಸಲಾಗುತ್ತಿದೆ ? ಇದಕ್ಕಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಏಕೆ ಕಷ್ಟಪಡಬೇಕು ಎಂಬ ಪಶ್ನೆಯೂ ಕಾಡುತ್ತದೆ. ಕಿರೀಟ ತೊಡಿಸಿಕೊಳ್ಳುವುದು ಸುಲಭದ ಮಾತಲ್ಲ . ಸಾಕ್ಷಿ ಪುರಾವೆಗಳನ್ನು ಸಂಗ್ರಹ ಮಾಡಿ ವೈಜ್ಞಾನಿಕವಾಗಿ ಸ್ಥಳೀಯವಾಗಿ ಮಹತ್ವ ಪಡೆದುಕೊಂಡಿದೆ ಎಂಬುದನ್ನು ಅನುಮಾನಕ್ಕೆ ಎಡೆ ಮಾಡಿಕೊಡದಂತೆ ಸಾಬೀತುಪಡಿಸಲು ಏಳು  ಕರೆ ನೀರು ಕುಡಿಯಬೇಕು. ಈಗಾಗಲೇ ಜಿಐ ಕಿರೀಟ ತೊಡಿಸಿಕೊಂಡಿರುವ ನಂಜನಗೂಡಿನ ರಸಬಾಳೆ, ಕೊಡಗಿನ ಕಿತ್ತಳೆ, ದೇವನಹಳ್ಳಿಯ ಚಕೋತ ಮುಂತಾದ ತಳಿಗಳು ಯಾವುದೇ ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಿ ಕಂಡು ಹಿಡಿದ ತಳಿಗಳಲ್ಲ. ಇವು ಸಂಪ್ರದಾಯ, ಸಹಜ ಮಣ್ಣು ಮತ್ತು ನೀರಿನ ಗುಣಲಕ್ಷಣಗಳನ್ನು ಹೀರಿಕೊಂಡು ಬೆಳೆಯುವ ಪ್ರಾದೇಶಿಕ ವಿಶೇಷ ತಳಿಗಳಾಗಿವೆ. ಹೀಗಾಗಿಯೇ ಸಕರ್ಾರ, ಕೃಷಿಯಲ್ಲಿ ಆಸಕ್ತಿ ಹೊಂದಿರುವ ಸ್ವಯಂಸೇವಾ ಸಂಸ್ಥೆಗಳು ಈ ತಳಿಗಳನ್ನು ಉಳಿಸಿ ಬೆಳೆಸಬೇಕಾಗಿದೆ.  ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಆಸಕ್ತಿ ತಳೆಯುವುದು ಬಹಳ ಅಗತ್ಯವಾಗಿದೆ. ಹೀಗಾಗಿ ಇಂತಹ ಅಪರೂಪದ ತಳಿಗಳನ್ನು ಸಂರಕ್ಷಣೆ ಮಾಡಿ, ಬ್ರಾಂಡ್ ಇಮೇಜ್ ಸೃಷ್ಟಿಸಿ ಅವುಗಳನ್ನು ಕಾಪಾಡುವ ಮಾರುಕಟ್ಟೆಯ ಹೊಸ ಸ್ವರೂಪ ನೀಡುವ ಪರಿಕಲ್ಪನೆ ಹೊಸದಾಗಿ ಆರಂಭವಾಗಿದೆ.   ಜಿಐ ಪರಿಕಲ್ಪನೆ ಆರಂಭವಾಗಿದ್ದು ಯಾವಾಗ ? ಕಾಯ್ದೆಯಾಗಿ ಜಾರಿಗೆ ಬಂದಿದ್ದು ಯಾವಾಗ?  ಪ್ರಾದೇಶಿಕ ಮಹತ್ವದ, ತಲತಲಾಂತರಗಳಿಂದ ಮಣ್ಣು, ನೀರಿನ ಗುಣಲಕ್ಷಣಗಳಿಂದ ಬಂದಿರುವ ಸಮುದಾಯ ತಳಿಗಳನ್ನು ಮುಂದಿನ ಪೀಳಿಗೆಯ ಆಸ್ತಿ ಎಂದು ಸಂರಕ್ಷಣೆ ಮಾಡಬೇಕು ಎಂಬ ಸುದೀರ್ಘ ಚರ್ಚೆ ಯ ನಂತರ ಸಂಸತ್ತಿನಲ್ಲಿ ಈ ಕಾಯ್ದೆ 1999ರಲ್ಲಿ  ಅಂಗೀಕಾರ ಪಡೆಯಿತು.  ಆದರೆ ಅದಕ್ಕೆ ಸರಿಯಾದ ನಿಯಮಾವಳಿಗಳನ್ನು ರೂಪಿಸಲು ಎರಡು-ಮೂರು ವರ್ಷಗಳ ಕಾಲ ತೆಗೆದುಕೊಂಡಿತು. ಅಂತಿಮವಾಗಿ ದೇಶಾದ್ಯಂತ ಜಿಐ ಕಾಯ್ದೆ 2003 ಸೆಪ್ಟೆಂಬರ್ ನಲ್ಲಿ ಜಾರಿಗೆ ಬಂದಿದೆ. ದಕ್ಷಿಣ ಭಾರತದ ಪ್ರಾದೇಶಿಕ ಜಿಐ ನೋಂದಣಿ ಕಚೇರಿ, ಚೆನ್ನೈ ನಗರದಲ್ಲಿ ಸ್ಥಾಪನೆಯಾಗಿದೆ.  ಕೊಡಗಿನ ಕಿತ್ತಳೆ, ಮೈಸೂರಿನ ವೀಳ್ಯೆದೆಲೆ ಮತ್ತು ನಂಜನಗೂಡಿನ ರಸಬಾಳೆ ಮುಂತಾದ ಹಲವು ತೋಟಗಾರಿಕಾ ಉತ್ಪನ್ನಗಳಿಗೆ ಜಿಐ ಕಿರೀಟ ತೊಡಿಸುವಲ್ಲಿ ತುಮಕೂರು ಜಿಲ್ಲೆಯವರಾದ ತೋಟಗಾರಿಕೆ ಇಲಾಖೆಯ  ನಿವೃತ್ತ ಅಧಿಕಾರಿ ಕೆ.ರಾಮಕೃಷ್ಣಪ್ಪ ಅವರ ಪ್ರಯತ್ನ, ಕಾಳಜಿ ಬಹಳವಾಗಿದೆ.   ಈ ಕುರಿತು ಕನ್ನಡ ಯುಎನ್ಐ ಸುದ್ದಿ ಸಂಸ್ಥೆ  ಜೊತೆ ಮಾತನಾಡಿದ ಅವರು,  ಜಿಐ ಕಿರೀಟ ತೊಡಿಸಿಕೊಳ್ಳುವುದರಿಂದ  ಹಲವು  ಪ್ರಯೋಜನವಿದೆ .ಬೇರೆಯವರು  ಇದನ್ನು ನಕಲು ಮಾಡಲು ಸಾಧ್ಯವಿಲ್ಲ,  ಇದನ್ನು ಮಂದಿನ ಪೀಳಿಗೆಗೆ ರಕ್ಷಣೆ ಮಾಡಲು ಸಹಕಾರಿಯಾಗಲಿದೆ ಎನ್ನುತ್ತಾರೆ .     ತೋಟಗಾರಿಕಾ ಇಲಾಖೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ  ನಿವೃತ್ತಿಯ ನಂತರವೂ ಕೃಷಿಯ ಜೊತೆ ಒಡನಾಟ  ಇಟ್ಟುಕೊಂಡು ರೈತರ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.  ಅವರ ಅವಿರತ ಪ್ರಯತ್ನದಿಂದ ನಂಜನಗೂಡು ರಸಬಾಳೆ, ಮೈಸೂರು ವೀಳ್ಯೆದೆಲೆ ಮುಂತಾದ ಉತ್ಪನ್ನಗಳಿಗೆ ಜಿಐ ಕಿರೀಟ ಸಿಕ್ಕಿದೆ. ದೇಶಿಯ ತಳಿಗಳ ಅಭಿವೃದ್ಧಿ ಮೂಲಕ ರೈತರ ಆದಾಯ  ಸುಧಾರಿಸುವ ಕಾಯಕದಲ್ಲಿ ಅವರು ತೊಡಗಿದ್ದಾರೆ.   ಇದುವರೆಗೆ ತೋಟಗಾರಿಕೆ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಮಾತ್ರ ಜಿಐ ಕಿರೀಟ ಸಿಕ್ಕಿದೆ. ಈಗ ಅವರು ಮತ್ತು ಕೃಷಿ ಬೆಲೆ ಆಯೋಗ, ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆ ಜಂಟಿ ಪ್ರಯತ್ನದಿಂದ ಹಳೆ ಮೈಸೂರು ಭಾಗದಲ್ಲಿ ಬೆಳೆಯುವ ರಾಜಮುಡಿ ಎಂಬ ಭತ್ತದ ತಳಿ ವರ್ಷ೦ತ್ಯದ ವೇಳೆಗೆ ಜಿಐ ಕಿರೀಟ ತೊಡಿಸಿಕೊಂಡು ಹೊಸ ಮೆರುಗಿನೊಂದಿಗೆ ಹೊಸ ಅಧ್ಯಾಯ ಬರೆಯಲು ತುದಿಗಾಲಲ್ಲಿ ನಿಂತಿದೆ. ಹಾಗೆ ನೋಡಿದರೆ ಬೇರೆ ರಾಜ್ಯಗಳಿಗಿಂತ ಜಿಐ ಕಿರೀಟ ತೊಡಿಸಿಕೊಳ್ಳುವಲ್ಲಿ ರಾಜ್ಯ ಹೆಚ್ಚಿನ  ಸಾಧನೆ ಮಾಡಿದೆ.ಇದುವರೆಗೆ  ರಾಜ್ಯದ 45ಕ್ಕೂ ಹೆಚ್ಚು ತೋಟಗಾರಿಕಾ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಜಿಐ ಸ್ಥಾನಮಾನ ದೊರಕಿದೆ. ಇನ್ನು ಕೆಲವು ಉತ್ಪನ್ನಗಳು ಕಿರೀಟ  ತೊಡಿಸಿಕೊಳ್ಳುವ ಹಾದಿಯಲ್ಲಿ  ಸಾಗಿವೆ ಎಂದು ಅವರು ಹೇಳಿದ್ದಾರೆ.    ಯಾವುದಾದರೂ ಉತ್ಪನ್ನಕ್ಕೆ ಜಿಐ ಸ್ಥಾನಮಾನ ಸಿಕ್ಕಿದರೆ ಅದಕ್ಕೆ ಮೂರು ರೀತಿಯ ಪೇಟೆಂಟ್ ದೊರಕಿದಂತಾಗುತ್ತದೆ. ಅದನ್ನು ಬೇರೆಯವರು ನಕಲು ಮಾಡಲು, ಬೆಳೆದು ಮಾರುಕಟ್ಟೆ ಮಾಡಿ ಪ್ರಯೋಜನ ಪಡೆದುಕೊಳ್ಳಲು ಆಗುವುದಿಲ್ಲ. ಜಿಐ ಸ್ಥಾನಮಾನ ಪಡೆದ ಉತ್ಪನ್ನಗಳು ಯಾವುದೋ ವ್ಯಕ್ತಿ ಮತ್ತು ಸಂಸ್ಥೆಯ ಉತ್ಪನ್ನವಾಗುವುದಿಲ್ಲ. ಅದು ಸಮುದಾಯದ ಆಸ್ತಿ ಎಂದು ಸುಪ್ರೀಂಕೋರ್ಟ್ ಮುದ್ರೆ ಒತ್ತಿದೆ. ಪರಂಪರಾಗತ ತಳಿಗಳಿಗೆ ಆ ಪ್ರದೇಶದ ಭೌಗೋಳಿಕ ವಾತಾವರಣವೇ ಜಿಐ ಸ್ಥಾನಮಾನ ಕೊಟ್ಟಿದೆ. ಇನ್ನೂ ಬಿಡಿಸಿ ಹೇಳಬೇಕೆಂದರೆ, ಇದು ಪ್ರಕೃತಿಯೇ ನೀಡಿದ ವರ. ಇದನ್ನು ಯಾರೊಬ್ಬರೂ ಬದಲಿಸಲು ಸಾಧ್ಯವೇ ಇಲ್ಲ. ಉದಾಹರಣೆಗೆ ನಂಜನಗೂಡಿನ ರಸಬಾಳೆಯನ್ನು ಬೇರೆ ಜಿಲ್ಲೆಗಳಲ್ಲಿ, ಬೇರೆ ರಾಜ್ಯಗಳಲ್ಲಿ ಬೆಳೆಯಬಹುದು, ಮಾರಾಟ ಮಾಡಲೂಬಹುದು. ಆದರೆ ನಂಜನಗೂಡು ಸುತ್ತಮುತ್ತ ಬೆಳೆಯುವ ರಸಬಾಳೆಯಲ್ಲಿರುವ ಗುಣಲಕ್ಷಣಗಳು, ಪೋಷಕಾಂಶಗಳು ಬೇರೆ ಪ್ರದೇಶದಲ್ಲಿ ಬೆಳೆಯುವ ರಸಬಾಳೆಗೆ ಬರುವುದಿಲ್ಲ  ಎನ್ನುತ್ತಾರೆ.  ಇನ್ನು ಸಕರ್ಾರದ ಯಾವುದೇ ಇಲಾಖೆ, ಯಾವುದೇ ಉತ್ಪನ್ನಗಳಿಗೆ ಜಿಐ ಸ್ಥಾನಮಾನ ಪಡೆದುಕೊಂಡರೂ ಅದರ ಮಾಲೀಕತ್ವದ ಹಕ್ಕನ್ನು ತಾನೇ ಇಟ್ಟುಕೊಳ್ಳುವಂತಿಲ್ಲ. ಆ ಪ್ರದೇಶದಲ್ಲಿ ಬೆಳೆಗಾರರ ಸೊಸೈಟಿ ಸ್ಥಾಪನೆ ಮಾಡಿ ಅದಕ್ಕೆ ಮಾಲೀಕತ್ವದ ಹಕ್ಕನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಆದೇಶ ಮಾಡಿ, ಇದು ಎಂದೆಂದಿಗೂ  ಸಮುದಾಯದ  ಆಸ್ತಿ, ಯಾರೊಬ್ಬರ  ವೈಯಕ್ತಿಕ  ಸೊತ್ತಲ್ಲ ಎಂದೂ  ಹೇಳಿರುವುದು  ಇದರ  ಮಹತ್ವ ಸಾರಿದೆ.