ಸುಸಜ್ಜಿತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಕಲ ಸಿದ್ಧತೆ: ಟಿ ಎಸ್ ಆಲಗೂರ
ಲೋಕದರ್ಶನ ವರದಿ
ಇಂಡಿ 19: ವಿದ್ಯಾರ್ಥಿಗಳ ಭವಿಷ್ಯದ ಪ್ರಥಮ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾಲೂಕಿನಾದ್ಯಂತ ಇದೆ ದಿ. 21ರಿಂದ ಏ. 4ರವರೆಗೆ ಜರುಗಲಿದ್ದು, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಇಂಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಅವರು ತಿಳಿಸಿದ್ದಾರೆ
ಇಂಡಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಇಂಡಿ ತಾಲೂಕಿನ ಒಟ್ಟು 17 ಪರೀಕ್ಷಾ ಕೇಂದ್ರದಲ್ಲಿ 2594 ಗಂಡು ಹಾಗೂ 2382 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 4976ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರಿಯಲ್ಲಿದ್ದಾರೆ. ಇಂಡಿ ನಗರದಲ್ಲಿ ಎಂಟು ಪರೀಕ್ಷೆ ಕೇಂದ್ರಗಳು ಇದ್ದು, ಉಳಿದಂತೆ ತಾಲ್ಲೂಕಿನ ಅಥರ್ಗಾ, ತಾಂಬಾ, ಚವಡಿಹಾಳ ನಾದ ,ಲಚ್ಯಾಣ,ಸಾಲೂಟಿಗಿ, ಗೋಳಸಾರ ಸೇರಿದಂತೆ ತಾಲೂಕಿನ ಒಂಬತ್ತು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡಿಸಲು ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಮೊಬೈಲ್ ವಶಪಡಿಸಿಕೊಳ್ಳುವ ಅಧಿಕಾರಿಗಳನ್ನು ನೇಮಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಕೆ, ಹಾಗೂ ಹಳ್ಳಿಗಳ್ಳಿಯಿಂದ ಪರೀಕ್ಷಾ ಕೇಂದ್ರಗಳಿಗೆ ಬರಲು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು, ಹಾಗೂ ಎಲ್ಲಾ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳಿಗೆ ಬಿಸಿ ಊಟದ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ನಿಯೋಜನೆ ಕೂಡಾ ಮಾಡಲಾಗಿದೆ. ಒಟ್ಟಿನಲ್ಲಿ ಈ ಬಾರಿ ಇಂಡಿ ತಾಲೂಕಿನಾದ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ನಮ್ಮ ಸಿಬ್ಬಂದಿ ವರ್ಗ ಸನ್ನದ್ಧವಾಗಿದೆ. ಮಕ್ಕಳು ಭಯ ಭೀತಿ ಇಲ್ಲದೆ ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆದು ಯಶಸ್ಸು ಸಾಧಿಸಿ ಹಾಗೂ ವಿದ್ಯಾರ್ಥಿಗಳ ಭವಿಷ್ಯ ಉಜ್ಜಲ ಆಗಲಿ ಎಂದು ವಿದ್ಯಾರ್ಥಿಗಳಿಗೆ ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಅವರು ಶುಭ ಹಾರೈಸಿದರು. ಇಂಡಿ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೋಡಲ್ ಅಧಿಕಾರಿ ಎ ಓ ಹೂಗಾರ ಹಾಗೂ ಶರಣು ಐರೋಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.