ನವದೆಹಲಿ, ಜೂನ್ ೧೨, ಲಾಕ್ ಡೌನ್ ಅವಧಿಯಲ್ಲಿ ವೇತನ ಪಾವತಿ ಸಂಬಂಧ ಖಾಸಗಿ ಕಂಪನಿಗಳು ಹಾಗೂ ಕಾರ್ಮಿಕರ ನಡುವಣ ಉಂಟಾಗಿರುವ ಬಿಕ್ಕಟ್ಟು ಇತ್ಯರ್ಥಪಡಿಸಲು ನೆರವಾಗುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದು, ಈ ಸಂಬಂಧ ವರದಿಯನ್ನು ಕಾರ್ಮಿಕ ಆಯುಕ್ತರ ಮುಂದೆ ಸಲ್ಲಿಸಬಹುದಾಗಿದೆ ಎಂದು ಹೇಳಿದೆ.ಲಾಕ್ ಡೌನ್ ಅವಧಿಯಲ್ಲಿ ಪೂರ್ಣ ವೇತನ ಪಾವತಿಸದ ಖಾಸಗಿ ಸಂಸ್ಥೆಗಳ ವಿರುದ್ದ ದಬ್ಬಾಳಿಕೆಯ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಕೋರ್ಟ್ ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ. ಉದ್ಯೋಗದಾತ ಕಂಪನಿಗಳ ವಿರುದ್ದ ಯಾವುದೇ ಬಲವಂತದ ಕ್ರಮಗಳನ್ನು ಜರುಗಿಸಬಾರದು ಎಂದು ನಾವು ಆದೇಶಿಸುತ್ತೇವೆ. ನಮ್ಮ ಈ ಹಿಂದಿನ ಆದೇಶಗಳು ಮುಂದುವರಿಯಲಿವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ಣ ವೇತನ ಪಾವತಿಸುವುದು ಕಡ್ಡಾಯಗೊಳಿಸಿ ಮಾರ್ಚ್ ೨೯ರಂದು ಹೊರಡಿಸಿರುವ ಸುತ್ತೋಲೆಯ ಕಾನೂನು ಬದ್ಧತೆಯ ಬಗ್ಗೆ ನಾಲ್ಕು ವಾರದೊಳಗೆ ಪ್ರಮಾಣ ಪತ್ರ ಸಲ್ಲಿಸುವಂತೆ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
೫೪ ದಿನಗಳ ಲಾಕ್ ಡೌನ್ ಅವಧಿಯ ವೇಳೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ವೇತನ ನೀಡಬೇಕೆಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಆದೇಶ ವನ್ನು ಪ್ರಶ್ನಿಸಿ ಹಲವು ಖಾಸಗಿ ಕಂಪನಿಗಳು ಸಲ್ಲಿಸಿದ್ದ ಆರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.ಕೈಗಾರಿಗಳು ಹಾಗೂ ಕಾರ್ಮಿಕರು ಒಬ್ಬರಿಗೆ ಮತ್ತೊಬ್ಬರು ಅನಿವಾರ್ಯವಾಗಿದ್ದು, ವೇತನ ಪಾವತಿ ವಿವಾದವನ್ನು ಪರಿಹರಿಸಲು ಪ್ರಯತ್ನ ನಡೆಸಬೇಕು ಎಂದು ಪೀಠ ಹೇಳಿದೆ.೫೪ ದಿನಗಳ ವೇತನ ಸಂಬಂಧ ಉಂಟಾಗಿರುವ ಕಗ್ಗಂಟು ಪರಿಹರಿಸಲು ಏನು ಮಾಡಬೇಕು ಎಂದು ತೀರ್ಮಾನಿಸಲು ಕಂಪನಿಗಳು ಹಾಗೂ ಕಾರ್ಮಿಕರ ನಡುವೆ ಮಾತುಕತೆ ನಡೆಯಬೇಕು ಎಂದು ನ್ಯಾಯಾಲಯ ಜೂನ್ ೪ರಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.ದೇಶಾದ್ಯಂತ ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ಣ ವೇತನ ಪಾವತಿಸಬೇಕು ಎಂಬ ಕೇಂದ್ರದ ಆದೇಶ ಪ್ರಶ್ನಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿತು. ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿತ್ತು ಅಲ್ಲಿಂದ ಸುಮಾರು ೫೪ಕ್ಕೂ ಅಧಿಕ ದಿನಗಳವರೆಗೂ ಅಗತ್ಯ ಸೇವೆ ಹೊರತುಪಡಿಸಿದರೆ ಬೇರೆ ಯಾವುದೆ ಚಟುವಟಿಕೆಯೂ ನಡೆದಿರಲಿಲ್ಲ .ಈ ವೇಳೆ ಲಾಕ್ಡೌನ್ ಅವಧಿಯಲ್ಲೂ ಕಾರ್ಮಿಕರಿಗೆ ಕಂಪನಿಗಳು ಪೂರ್ತಿ ಸಂಬಳ ನೀಡಬೇಕು ಎಂದು ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ಕೇಂದ್ರದ ಆದೇಶ ಪ್ರಶ್ನಿಸಿ, ಖಾಸಗಿ ಕಂಪನಿಗಳು ಕಾನೂನು ಹೋರಾಟಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದವು.